ಯುವತಿಯೋರ್ವಳು ಪೊಲೀಸ್‌ ಲಾಠಿ ಹಿಡಿದು ರಸ್ತೆಯಲ್ಲಿ ಚುಡಾಯಿಸುತ್ತಿದ್ದ ಪುಂಡ ಪೋಕರಿಗಳಿಗೆ ಅಟ್ಟಾಡಿಸಿಕೊಂಡು ಹೊಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ

ಲಕ್ನೋ (ಮಾ. 21): ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಯುವತಿಯೋರ್ವಳು ಪೊಲೀಸ್‌ ಲಾಠಿ ಹಿಡಿದು ರಸ್ತೆಯಲ್ಲಿ ಚುಡಾಯಿಸುತ್ತಿದ್ದ ಪುಂಡ ಪೋಕರಿಗಳಿಗೆ ಅಟ್ಟಾಡಿಸಿಕೊಂಡು ಹೊಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಯೋರ್ವಳು ತನ್ನ ಸ್ನೇಹಿತೆಯರೊಂದಿಗೆ ಮಾರ್ಕೆಟ್‌ನಲ್ಲಿ ಹೋಗುತ್ತಿದ್ದಾಗ ಕೆಲ ಕಿಡಿಗೇಡಿಗಳು ಯುವತಿಯರನ್ನ ಚುಡಾಯಿಸಿದರು ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸ್‌ ಪೇದೆ ಇದ್ದರೂ ಪೋಕರಿಗಳ ಅಟ್ಟಹಾಸ ಮುಂದುವರಿದಿದೆ.

ಇದರಿಂದ ರೊಚ್ಚಿಗೆದ್ದ ಯುವತಿ ಪೊಲೀಸ್‌ ಕೈಯಲ್ಲಿದ್ದ ಲಾಠಿಯನ್ನು ತೆಗೆದು ಆ ಯುವಕರನ್ನು ಅಟ್ಟಾಡಿಸಿ ಥಳಿಸಿದ್ದಾಳೆ. ಬಳಿಕ ಸ್ನೇಹಿತರು ಆಕೆಯನ್ನು ಕರೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇನ್ನು ಈ ಘಟನೆ ಮಾರ್ಚ್‌ 19ರಂದು ಲಕ್ನೋದ ಗೌತಮ್‌ ಪಾಲಿ ನಗರದಲ್ಲಿ ನಡೆದಿದೆ. ಯುವತಿ ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.