ಬೆಂಗಳೂರು[ಜೂ.10]: ಇಂದು ನಿಧನರಾದ ಖ್ಯಾತ ಸಾಹಿತಿ, ರಂಗಭೂಮಿ, ಸಿನಿಮಾ ನಟರೂ ಆಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಜೂನ್ 10ರ, ಸೋಮವಾರ ಸರ್ಕಾರಿ ರಜೆ ಘೋಷಿಸಲಾಗಿದೆ. ಮೂರು ದಿನಗಳ  ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಕಾರ್ನಾಡ್ ಅಂತಿಮ ಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

"

ತನ್ನ ಅಂತಿಮ ದರ್ಶನಕ್ಕೆ ಯಾರೂ ಬರಬಾರದು, ಅಲ್ಲದೇ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಅಂತಿಮ ಕ್ರಿಯೆ ನಡೆಸಬೇಕೆಂಬ ಇಚ್ಛೆ ಗಿರೀಶ್ ಕಾರ್ನಾಡರದ್ದಾಗಿತ್ತು. ಇದರಂತೆ ಅವರ ಕುಟುಂಬಸ್ಥರು ಸಾರ್ವಜನಿಕರ ದರ್ಶನ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ಸರ್ಕಾರಿ ಗೌರವವೂ ಬೇಡ ಎಂದಿತ್ತು. ಆದರೀಗ ೀ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ 'ಈ ಹಿಂದೆ ನಿಧನರಾದ ಇತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಗೌರವಾರ್ಥ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕಾರ್ನಾಡ್ ಅವರ ಗೌರವಾರ್ಥವಾಗಿ ಕೈಗೊಳ್ಳಲಿದೆ' ಎಂದಿದ್ದಾರೆ.

ಕಾರ್ನಾಡ್ ನಿಧನದ ಹಿನ್ನೆಲೆ ಬುಧವಾರದಂದು ನಡೆಯಲಿದ್ದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮವನ್ನೂ ಮುಂದೂಡಲಾಗಿದೆ. ಎಂದು ಅವರು ಸ್ಪಷ್ಟಪಡಿಸಿದ್ದಾರೆ.