Asianet Suvarna News Asianet Suvarna News

ಕರ್ನಾಟಕದಲ್ಲಿ ಲಿಂಗಾನುಪಾತ ಮತ್ತಷ್ಟು ಕುಸಿತ : 1000ಗಂಡು ಮಕ್ಕಳಿಗೆ - 939 ಹೆಣ್ಣು ಮಕ್ಕಳು

ಕರ್ನಾಟಕದಲ್ಲಿ ಲಿಂಗಾನುಪಾತ ಮತ್ತಷ್ಟು ಕುಸಿತ : 1000ಗಂಡು ಮಕ್ಕಳಿಗೆ - 939 ಹೆಣ್ಣು ಮಕ್ಕಳು

Gender Discrimination In Karnataka

ನವದೆಹಲಿ : ಹೆಣ್ಣು ಭ್ರೂಣಹತ್ಯೆ ತಡೆಗೆ ಸರ್ಕಾರ ಪರಿಣಾಮಕಾರಿಯಾಗಿ ಕ್ರಮ ಕೈಗೊಂಡಿದ್ದೇನೆಂದು ಹೇಳಿಕೊಂಡರೂ ಕರ್ನಾಟಕದಲ್ಲಿ ಲಿಂಗಾನುಪಾತ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿರುವುದು ನೀತಿ ಆಯೋಗದ ವರದಿಯಲ್ಲಿ ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ಪ್ರತಿ 1000 ಗಂಡುಮಕ್ಕಳಿಗೆ 950 ಇದ್ದ ಹೆಣ್ಣುಮಕ್ಕಳ ಜನನ ಸಂಖ್ಯೆ 2012-13 ಹಾಗೂ 2014-15ರ ನಡುವೆ 939ಕ್ಕೆ ಇಳಿಕೆಯಾಗಿದ್ದು, ಲಿಂಗಾನುಪಾತ 11 ಅಂಕಗಳಷ್ಟುಇಳಿಕೆಯಾಗಿದೆ. ಈ ಕುರಿತು ನೀತಿ ಆಯೋಗವು ವಿಸ್ತೃತವಾದ ಆರೋಗ್ಯ ಇಂಡೆಕ್ಸ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಉತ್ತರಾಖಂಡ, ಹರ್ಯಾಣ ಸೇರಿದಂತೆ ದೇಶದ ಒಟ್ಟು 17 ರಾಜ್ಯಗಳಲ್ಲಿ ಲಿಂಗಾನುಪಾತ ಇಳಿಕೆಯಾಗಿರುವುದು ಕಂಡುಬಂದಿದೆ. ಕೇವಲ ಬಿಹಾರ, ಪಂಜಾಬ್‌ ಹಾಗೂ ಉತ್ತರ ಪ್ರದೇಶದಲ್ಲಿ ಮಾತ್ರ ಲಿಂಗಾನುಪಾತ ಹೆಚ್ಚಳವಾಗಿದೆ.

ದೇಶದ 21 ದೊಡ್ಡ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಲಿಂಗಾನುಪಾತ ಇಳಿಕೆಯಾಗಿರುವುದು ಭ್ರೂಣಹತ್ಯೆ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿರುವುದನ್ನು ತೋರಿಸುತ್ತದೆ. 1994ರ ಭ್ರೂಣಹತ್ಯೆ ತಡೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗದ ಪರಿಣಾಮ ಲಿಂಗಾನುಪಾತ ಇಳಿಕೆಯಾಗುತ್ತಿದೆ ಎಂದು ನೀತಿ ಆಯೋಗದ ವರದಿ ಹೇಳಿದೆ.

ದೇಶದಲ್ಲೇ ಗುಜರಾತ್‌ನಲ್ಲಿ 2013-15ರ ಅವಧಿಯಲ್ಲಿ ಲಿಂಗಾನುಪಾತ ಅತಿ ಹೆಚ್ಚು ಅಂಕ (907ರಿಂದ 854ಕ್ಕೆ) ಕುಸಿದಿದೆ. ಹರ್ಯಾಣದಲ್ಲಿ ಲಿಂಗಾನುಪಾತವು ದೇಶದಲ್ಲೇ ಅತಿ ಕಡಿಮೆಯಿದ್ದು, ಅಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 831 ಹೆಣ್ಣುಮಕ್ಕಳು ಜನಿಸುತ್ತಿದ್ದಾರೆ. ಆದರೆ, ಲಿಂಗಾನುಪಾತ ಕುಸಿತದ ಪ್ರಮಾಣ ಹರ್ಯಾಣದಲ್ಲಿ ಗುಜರಾತಿಗಿಂತ ಕಡಿಮೆಯಿದೆ. ದೇಶದಲ್ಲಿ ಲಿಂಗಾನುಪಾತದ ರಾಷ್ಟ್ರೀಯ ಸರಾಸರಿ 900 ಇದೆ. ಇದು 2013-15ರ ಅವಧಿಯಲ್ಲಿ 6 ಅಂಕಗಳಷ್ಟುಕುಸಿದಿದೆ. ದೇಶದಲ್ಲಿ ಅತಿ ಹೆಚ್ಚು ಲಿಂಗಾನುಪಾತವಿರುವ ರಾಜ್ಯ ಕೇರಳ ಆಗಿದ್ದು, ಅಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 967 ಹೆಣ್ಮಕ್ಕಳು ಜನಿಸುತ್ತಿದ್ದಾರೆ.

Follow Us:
Download App:
  • android
  • ios