ಶಿವಮೊಗ್ಗ ಹಾಗೂ ಕಾರವಾರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಪ್ರಚಾರ ನಡೆಸಲಿದ್ದಾರೆ.
ಶಿವಮೊಗ್ಗ: ಶಿವಮೊಗ್ಗ ಹಾಗೂ ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಪ್ರಚಾರ ನಡೆಸಲಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಅವರು ಮಾ.19ರಿಂದ 4 ದಿನ ಮೊದಲ ಹಂತದಲ್ಲಿ ಜಿಲ್ಲಾ ಪ್ರವಾಸ ನಡೆಸುವರು. ತೀರ್ಥಹಳ್ಳಿ, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು. 2ನೇ ಹಂತದಲ್ಲಿ ಕಾರವಾರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ. ಶಿವರಾಜ್ ಕುಮಾರ್ ಅವರು ಪಕ್ಷಾತೀತ ನಾಯಕರು. ಅವರನ್ನು ಯಾವುದೇ ಕಾರಣಕ್ಕೂ ಪ್ರಚಾರಕ್ಕೆ ಎಳೆದುತರುವುದಿಲ್ಲ ಎಂದರು.
ಮಾ.25ರ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜತೆಗೆ ಮುಖಂಡರಾದ ಎಚ್. ವಿಶ್ವನಾಥ್, ಪಿ.ಜಿ.ಆರ್. ಸಿಂಧ್ಯಾ, ವೈ.ಎಸ್.ವಿ.ದತ್ತಾ, ಬಸವರಾಜ ಹೊರಟ್ಟಿ, ಶಶಿಭೂಷಣ್ ಹೆಗಡೆ ಮತ್ತಿತರರೂ ಆಗಮಿಸುವರು ಎಂದರು.
ಈಗಾಗಲೇ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಇದರಲ್ಲಿ ಯಾರೂ ಬದಲಾಗುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಸ್ಥಾನವಿಲ್ಲ ಎಂದು ಇದೇ ವೇಳೆ ಮಧುಬಂಗಾರಪ್ಪ ಸ್ಪಷ್ಟನೆ ನೀಡಿದರು.
ಅವರ ಪತ್ನಿ ಗೀತಾ ಶಿವರಾಜಕುಮಾರ್ ಅವರು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸುತ್ತಿದ್ದು, ದಿನಾಂಕ ನಿಗದಿಯಾಗಿವೆ.
- ಮಧು ಬಂಗಾರಪ್ಪ, ಜೆಡಿಎಸ್ ಶಾಸಕ
