ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿ ಗೆಲ್ಲಬೇಕು ಎಂದು ದೇವರ ಇಚ್ಛೆ ಇದ್ದರೆ ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಅವರು ಶನಿವಾರ ತಮ್ಮ ಪತ್ನಿ ಗೀತಾ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮೈಸೂರಿನಲ್ಲಿ ತಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರು ನಡೆಸುತ್ತಿದ್ದ ಶಾಂತಿಧಾಮದ ಅಭಿವೃದ್ಧಿ ಹಾಗೂ ಅಲ್ಲಿ ಶಾಲೆಯೊಂದನ್ನು ತೆರೆಯುವ ಬಗ್ಗೆ ಚರ್ಚಿಸಿದರು.

ಬಳಿಕ, ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್‌ಕುಮಾರ್,  ಗೀತಾ ಅವರು ಲೋಕಸಭಾ ಚುನಾವಣೆಗೆ  ಸ್ಪರ್ಧಿಸಬೇಕು, ಗೆಲ್ಲಬೇಕು ಎಂಬುದು ದೇವರ ಇಚ್ಛೆಯಾಗಿದ್ದರೆ ಅದನ್ನು ಯಾರು ತಡೆಯಲು ಆಗುವುದಿಲ್ಲ ಎಂದರು.

ಆದರೆ, ಜತೆಯಲ್ಲಿದ್ದ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದರು. ಅಲ್ಲದೆ, ಸಹೋದರ ಮಧು ಬಂಗಾರಪ್ಪ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವ ನಿರ್ಧಾರ ಕೈಗೊಂಡರೂ ಸ್ವಾಗತಿಸುವುದಾಗಿ ಹೇಳಿದರು.