ಮೇ ತಿಂಗಳಿನಲ್ಲಿ ನಡೆದಿದ್ದ ಅಪಘಾತದಲ್ಲಿ ವಿಷ್ಣು ಡಿಎಲ್ ಪೊಲೀಸರ ವಶಕ್ಕೆ ಡಿ.31ರ ವರೆಗೆ ಡಿಎಲ್ ಅಮಾನತು ಮಾಡಿದ್ದ ಸಾರಿಗೆ ಅಧಿಕಾರಿಗಳು
ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ ಐಷರಾಮಿ ಮರ್ಸಿಡೀಸ್ ಬೆಂಜ್ ಕಾರು ಚಾಲನೆ ಮಾಡಿ ಅಪಘಾತ ಎಸಗಿದ್ದ ಖ್ಯಾತ ಉದ್ಯಮಿ ದಿ.ಆದಿಕೇಶವಲು ಅವರ ಮೊಮ್ಮಗ ಗೀತಾವಿಷ್ಣು ಬಳಿ ಚಾಲನ ಪರವಾನಗಿಯೇ ಇರಲಿಲ್ಲ.
ಆರೋಪಿ ಗೀತಾವಿಷ್ಣು ಮೇ ತಿಂಗಳಲ್ಲಿ ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಬಸವನಗುಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣದಲ್ಲಿ ಬಸವನಗುಡಿ ಸಂಚಾರ ಪೊಲೀಸರು ಗೀತಾವಿಷ್ಣುವಿನ ಚಾಲನ ಪರವಾನಗಿ (ಡಿಎಲ್) ಜಪ್ತಿ ಮಾಡಿ ಅಮಾನತುಗೊಳಿಸುವಂತೆ ಡಿಎಲ್‌ಅನ್ನು ಸಾರಿಗೆ ಇಲಾಖೆಗೆ ರವಾನಿಸಿದ್ದರು.
ಸಾರಿಗೆ ಇಲಾಖೆ ಅಧಿಕಾರಿಗಳು ಡಿಸೆಂಬರ್ 31ರವರೆಗೆ ಗೀತಾವಿಷ್ಣುವಿನ ಚಾಲನ ಪರವಾನಗಿಯನ್ನು ಅಮಾನತು ಮಾಡಿ ಆದೇಶಿಸಿದ್ದರು. ಇದಾದ ಮೇಲೂ ಆರೋಪಿ ಗೀತಾವಿಷ್ಣು ಡಿಎಲ್ ಇಲ್ಲದೆ, ಸೆ.28 ರಂದು ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಓಮ್ನಿಗೆ ಕಾರಿಗೆ ಡಿಕ್ಕಿ ಮಾಡಿದ್ದ.
ಕಾರಿನಲ್ಲಿ ಮಾದಕ ದ್ರವ್ಯ ಸಾಗಾಟ ಆರೋಪಕ್ಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ವಿಚಾರಣೆಯಲ್ಲಿ ಗೀತಾವಿಷ್ಣು ನಾನೇ ಡ್ರೈವಿಂಗ್ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಜಯನಗರ ಸಂಚಾರ ಠಾಣೆ ಪೊಲೀಸರಿಗೆ ಕಾರಿನ ದಾಖಲೆ ಮತ್ತು ಡಿಎಲ್ ವಶಕ್ಕೆ ಒಪ್ಪಿಸಿ ಬೆಂಜ್ ಕಾರು ಬಿಡಿಸಿಕೊಳ್ಳಬೇಕು. ಅಲ್ಲದೆ, ಮದ್ಯಪಾನ ಮಾಡಿದ್ದರಿಂದ ಗೀತಾ ವಿಷ್ಣು ಡಿಎಲ್ ಜೀವನ ಪರ್ಯಂತ ರದ್ದಾಗುವ ಸಾಧ್ಯತೆ ಇರುವುದಾಗಿ ಆರ್’ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
