ಕಮಲ್ ಹಾಸನ್ ಅವರ ಭವಿಷ್ಯದ ಯೋಜನೆಗಳಿಗೆ ಒಳ್ಳೆಯ ಯಶಸ್ಸು ಸಿಗಲಿ. ಅವರಿಂದ ಇನ್ನೂ ಮಹತ್ತರ ಕಾರ್ಯಗಳು ನಡೆಯಬೇಕು ಎಂದು ಹಾರೈಸುತ್ತಾನೆ ಎಂದು ಗೌತಮಿ ತಮ್ಮ ಲೇಖನವೊಂದರಲ್ಲಿ ಬರೆದುಕೊಂಡಿದ್ದಾರೆ.
ಚೆನ್ನೈ(ನ. 01): ಗೌತಮಿ ಮತ್ತು ಕಮಲ್ ಹಾಸನ್ ಅವರು ಬೇರೆಯಾಗಿದ್ದಾರೆ. ಅವರಿಬ್ಬರ 13 ವರ್ಷದ ಲಿವ್-ಇನ್ ರಿಲೇಶನ್'ಶಿಪ್'ಗೆ ತೆರೆ ಬಿದ್ದಿದೆ. 2005ರಿಂದ ವಿವಾಹವಾಗದೇ ಒಟ್ಟಿಗೇ ಜೀವನ ನಡೆಸುತ್ತಿದ್ದ ಇವರಿಬ್ಬರು ಪರಸ್ಪರ ಗುಡ್'ಬೈ ಹೇಳಿದ್ದಾರೆ. ಈ ವಿಷಯವನ್ನು ಸ್ವತಃ ಗೌತಮಿಯವರೇ ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ ದಾರಿಗಳು ಬೇರೆ ಬೇರೆ ದಿಕ್ಕಿಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ದೂರ ಸರಿಯುವುದು ಅನಿವಾರ್ಯವಾಗಿದೆ ಎಂದು ಗೌತಮಿ ಹೇಳಿದ್ದಾರೆ. ಅಲ್ಲದೇ, ತಾನು ತನ್ನ ಮಗಳಿಗೆ ಒಳ್ಳೆಯ ತಾಯಿಯಾಗಬೇಕು. ಅದಕ್ಕಾಗಿ ತನ್ನ ಮನಸ್ಸು ಶಾಂತವಾಗಿರುವುದು ಅತ್ಯಗತ್ಯ. ಇದು ಆಗಬೇಕಿದ್ದಲ್ಲಿ ಕಮಲ್ ಹಾಸನ್'ರಿಂದ ತಾನು ಬೇರೆಯಾಗುವುದು ಅನಿವಾರ್ಯ ಎಂದು ನಟಿ ಗೌತಮಿ ವಿವರಿಸಿದ್ದಾರೆ. ಆದಾಗ್ಯೂ ಈ ನಿರ್ಧಾರಕ್ಕೆ ಬರಲು ತನಗೆ ಎರಡು ವರ್ಷ ಹಿಡಿಯಿತು ಎಂದು ಆಕೆ ಹೇಳಿಕೊಂಡಿದ್ದಾಳೆ.
ನಟಿ ಗೌತಮಿ 80ರ ದಶಕದಲ್ಲಿ ಸಿನಿಮಾ ಇಂಡಸ್ಟ್ರಿಗೆ ನಟಿಯಾಗಿ ಎಂಟ್ರಿಕೊಟ್ಟಿದ್ದವರು. 1998ರಲ್ಲಿ ಸಂದೀಪ್ ಭಾಟಿಯಾ ಎಂಬ ಉದ್ಯಮಿಯ ಕೈಹಿಡಿದ ಗೌತಮಿ, ಆತನಿಂದ ಸುಬ್ಬಲಕ್ಷ್ಮೀ ಎಂಬ ಮಗಳನ್ನು ಪಡೆಯುತ್ತಾರೆ, ಒಂದೇ ವರ್ಷದಲ್ಲಿ ಈ ದಂಪತಿಯ ವಿಚ್ಛೇದನವಾಗುತ್ತದೆ. ಅದಾದ ನಂತರ ಗೌತಮಿಯವರು ಕಮಲ್ ಹಾಸನ್'ರ ಸಾಂಗತ್ಯಕ್ಕೆ ಬರುತ್ತಾರೆ. ಮದುವೆಯ ಶಾಸ್ತ್ರದಲ್ಲಿ ಇಬ್ಬರಿಗೂ ನಂಬಿಕೆ ಇಲ್ಲದಿದ್ದರಿಂದ 2005ರಿಂದ ಲಿವ್'ಇನ್ ರಿಲೇಶನ್'ಶಿಪ್'ನಲ್ಲಿ ಒಟ್ಟಿಗೆ ಬಾಳತೊಡಗಿದ್ದರು. ಅವರ 13 ವರ್ಷದ ಸಂಬಂಧದ ಪಯಣ ಇದೀಗ ಮುಕ್ತಾಯಗೊಂಡಿದೆ.
ಕಮಲ್ ಹಾಸನ್ ಅವರ ಮೇಲೆ ತನಗೆ ಯಾವುದೇ ಮುನಿಸಿಲ್ಲ. ಬೇರೆಯಾಗುವುದು ಅನಿವಾರ್ಯವಷ್ಟೇ. ಕಮಲ್ ಹಾಸನ್ ಅವರ ಭವಿಷ್ಯದ ಯೋಜನೆಗಳಿಗೆ ಒಳ್ಳೆಯ ಯಶಸ್ಸು ಸಿಗಲಿ. ಅವರಿಂದ ಇನ್ನೂ ಮಹತ್ತರ ಕಾರ್ಯಗಳು ನಡೆಯಬೇಕು ಎಂದು ಹಾರೈಸುತ್ತಾನೆ ಎಂದು ಗೌತಮಿ ತಮ್ಮ ಲೇಖನವೊಂದರಲ್ಲಿ ಬರೆದುಕೊಂಡಿದ್ದಾರೆ.
