ಗೌರಿಗೆ ಗುಂಡಿಟ್ಟವರೇ ಮಹಾ ಹಂತಕರು?

Gauri Lankesh Was Murdered By The Same Kind Of Gun That Killed The Rationalists Joining the dots.
Highlights

ರಾಜ್ಯದ ಇಬ್ಬರು ಪ್ರಗತಿಪರ ಚಿಂತಕರ ಹತ್ಯೆ ಕೃತ್ಯದಲ್ಲಿ ಒಂದೇ ಬಂದೂಕು ಬಳಕೆ ಖಚಿತವಾದ ಬೆನ್ನಲ್ಲೇ ಪತ್ರಕರ್ತೆ ಗೌರಿ ಕೊಲೆ ಪ್ರಕರಣದ ಆರೋಪಿಗಳಿಗೆ ಮಹಾರಾಷ್ಟ್ರದಲ್ಲಿ ನಡೆದಿದ್ದ ಇಬ್ಬರು ಎಡಪಂಥೀಯ ಚಿಂತಕರ ಕೊಲೆಗಳಿಗೂ ನಂಟಿರುವ ಕುರಿತು ಮಹತ್ವದ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ.

ಬೆಂಗಳೂರು :  ರಾಜ್ಯದ ಇಬ್ಬರು ಪ್ರಗತಿಪರ ಚಿಂತಕರ ಹತ್ಯೆ ಕೃತ್ಯದಲ್ಲಿ ಒಂದೇ ಬಂದೂಕು ಬಳಕೆ ಖಚಿತವಾದ ಬೆನ್ನಲ್ಲೇ ಪತ್ರಕರ್ತೆ ಗೌರಿ ಕೊಲೆ ಪ್ರಕರಣದ ಆರೋಪಿಗಳಿಗೆ ಮಹಾರಾಷ್ಟ್ರದಲ್ಲಿ ನಡೆದಿದ್ದ ಇಬ್ಬರು ಎಡಪಂಥೀಯ ಚಿಂತಕರ ಕೊಲೆಗಳಿಗೂ ನಂಟಿರುವ ಕುರಿತು ಮಹತ್ವದ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ.

ರಾಜ್ಯದ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಮಹಾರಾಷ್ಟ್ರದ ಪ್ರಗತಿಪರ ಚಿಂತಕ ಗೋವಿಂದ ಪಾನ್ಸರೆ ಅವರ ಹತ್ಯೆಗಳಿಗೆ ಒಂದೇ ಪಿಸ್ತೂಲ್‌ ಬಳಕೆಯಾಗಿದ್ದು, ಈ ಮೂರು ಹತ್ಯೆಗಳಿಗೂ ಒಬ್ಬನೇ ಸೂತ್ರಧಾರ. ಆದರೆ, ಕೃತ್ಯಗಳಿಗೆ ಬೇರೆ ಬೇರೆ ಶೂಟರ್‌ಗಳನ್ನು ಆತ ಬಳಸಿದ್ದಾನೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಎರಡು ರಾಜ್ಯಗಳ ಎಸ್‌ಐಟಿ ಅಧಿಕಾರಿಗಳು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

ಅಲ್ಲದೆ, ಗೌರಿ ಲಂಕೇಶ್‌ ಕೊಲೆ ಪ್ರಕರಣದ ಪ್ರಮುಖ ಸಂಚುಕೋರ ಮಹಾರಾಷ್ಟ್ರದ ಮೂಲದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಹಾಗೂ ಶಿಕಾರಿಪುರದ ಸುಜೀತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌ ಮನೆಯಲ್ಲಿ ಡೈರಿಗಳು ಪತ್ತೆಯಾಗಿದ್ದವು. ಈ ಪೈಕಿ ಪ್ರವೀಣ್‌ ಮತ್ತು ಕಾಳೆ ಬಳಿ ಪತ್ತೆಯಾದ ಡೈರಿಗಳಲ್ಲಿ ಮರಾಠಿ ಭಾಷೆಯಲ್ಲಿ ಕೋಡ್‌ ವರ್ಡ್‌ನಲ್ಲಿ ಬರೆಯಲಾಗಿದ್ದ ಬರಹವನ್ನು ಡಿಕೋಡ್‌ ಮಾಡಿದಾಗ ಮಹಾರಾಷ್ಟ್ರದ ಗೋವಿಂದ ಪಾನ್ಸರೆ ಹಾಗೂ ನರೇಂದ್ರ ದಾಭೋಲ್ಕರ್‌ ಅವರ ಕೊಲೆಗೆ ಸಂಬಂಧಿಸಿ ಮಾಹಿತಿ ಸಿಕ್ಕಿದೆ. ಈ ಕುರಿತು ಆ ಪ್ರಕರಣಗಳ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅವರು ನಗರಕ್ಕೆ ಬಂದು ಡೈರಿಯ ಜೆರಾಕ್ಸ್‌ ಪ್ರತಿ ಪಡೆದುಕೊಂಡು ತೆರಳಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಆರೋಪಿಗಳ ಡೈರಿಯಲ್ಲಿ ಕನ್ನಡದಲ್ಲಿ ಬರೆಯಲಾಗಿದ್ದ ಕೋಡ್‌ ವರ್ಡ್‌ಗಳನ್ನು ಭೇದಿಸಿ ಅವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದೇವೆ. ಮರಾಠಿ ಭಾಷೆಯ ಕೋಡ್‌ಗಳ ಡಿಕೋಡ್‌ ಕಾರ್ಯಕ್ಕೆ ಸಿಬಿಐ ಹಾಗೂ ಮಹಾರಾಷ್ಟ್ರದ ಎಸ್‌ಐಟಿ ಅಧಿಕಾರಿಗಳು ನೆರವು ನೀಡಿದ್ದರು. ಗೌರಿ ಕೊಲೆ ಪ್ರಕರಣದ ತನಿಖೆ ತಾರ್ಕಿಕವಾಗಿ ಅಂತ್ಯಗೊಂಡ ಬಳಿಕ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌ ಹಾಗೂ ಸುಜಿತ್‌ ಕುಮಾರ್‌ನನ್ನು ಅವರು ವಿಚಾರಣೆಗೊಳಪಡಿಸಬಹುದು ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಕನ್ನಡಪ್ರಭ.
ಕ್ಕೆ ಮಾಹಿತಿ ನೀಡಿದ್ದಾರೆ.

ಎಲ್ಲ ಕೃತ್ಯಕ್ಕೂ ಪಿಸ್ತೂಲ್‌ ಒಂದೇ:  ಈಗಾಗಲೇ ಗೌರಿ ಹಾಗೂ ಕಲ್ಬುರ್ಗಿ ಅವರ ಹತ್ಯೆಯಲ್ಲಿ ಬಳಕೆಯಾಗಿರುವ 7.65 ಎಂಎಂ ಪಿಸ್ತೂಲ್‌ ಒಂದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯವು ಸ್ಪಷ್ಟಪಡಿಸಿರುವ ಕುರಿತು ಎಸ್‌ಐಟಿ ಅಧಿಕೃತವಾಗಿ ನ್ಯಾಯಾಲಯಕ್ಕೆ ತಿಳಿಸಿದೆ.

2015ರ ಮಹಾರಾಷ್ಟ್ರದ ಗೋವಿಂದ ಪಾನ್ಸರೆ ದಂಪತಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪಾನ್ಸರೆ ಪತ್ನಿ ಗಾಯಗೊಂಡಿದ್ದರು. ಅವರನ್ನು ಗಾಯಗೊಳಿಸಿದ್ದ ಗುಂಡು ಹಾಗೂ ಕಲ್ಬುರ್ಗಿ ಅವರ ಪ್ರಾಣ ತೆಗೆದ ಗುಂಡು ಒಂದೇ ಪಿಸ್ತೂಲಿಗೆ ಸೇರಿದ್ದು ಎಂದು ಪತ್ತೆಯಾಗಿತ್ತು. ಬಳಿಕ ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಗೌರಿ, ಕಲ್ಬುರ್ಗಿ ಹಾಗೂ ಪಾನ್ಸರೆ ಅವರ ಕೊಲೆ ಕೃತ್ಯದಲ್ಲಿ ಒಂದೇ ಪಿಸ್ತೂಲ್‌ ಬಳಕೆಯಾಗಿರುವುದು ಖಚಿತವಾಯಿತು ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.

ಒಂದೇ ತಂಡ, ಹಲವು ಉಪ ತಂಡ:

ಪುಣೆಯಲ್ಲಿ 2013ರ ಆಗಸ್ಟ್‌ 20ರಂದು ನರೇಂದ್ರ ದಾಭೋಲ್ಕರ್‌, ಕೋಲ್ಲಾಪುರದಲ್ಲಿ 2015ರ ಫೆಬ್ರವರಿ 18ರಂದು ಗೋವಿಂದ ಪಾನ್ಸರೆ, 2015ರ ಆಗಸ್ಟ್‌ 30ರಂದು ಧಾರವಾಡದಲ್ಲಿ ನಾಡಿನ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ, 2017ರ ಸೆಪ್ಟೆಂಬರ್‌ 5ರಂದು ಹಿರಿಯ ಪತ್ರಕರ್ತೆ ಗೌರಿ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಈ ನಾಲ್ವರು ಚಿಂತಕರ ಕೊಲೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಕಾರಣ ಎಂಬ ಆರೋಪ ಬಂದಿತ್ತು. ಕೊನೆಗೆ ಗೌರಿ ಲಂಕೇಶ್‌ ಹತ್ಯೆಗೆ ಬಲಪಂಥೀಯ ವಿರೋಧವೇ ಕಾರಣ ಎಂಬುದು ತನಿಖೆಯಲ್ಲಿ ಸ್ಪಷ್ಟವಾಯಿತು.

ದಾಭೋಲ್ಕರ್‌ ಅವರ ಹತ್ಯೆ ಬಗ್ಗೆ ಸಿಬಿಐ ಹಾಗೂ ಪಾನ್ಸರೆ ಅವರ ಕೊಲೆ ಆರೋಪಿಗಳ ಪತ್ತೆಗೆ ಆ ರಾಜ್ಯದ ಎಸ್‌ಐಟಿ ತನಿಖೆ ನಡೆಸಿದೆ. ಕಲ್ಬುರ್ಗಿ ಅವರ ಹಂತಕರ ಬೇಟೆಯನ್ನು ಸಿಐಡಿ ಮುಂದುವರೆಸಿದೆ. ಈ ನಾಲ್ವರು ಎಡಪಂಥೀಯ ಚಿಂತಕರ ಕೊಲೆಗಳನ್ನು ಒಂದೇ ತಂಡ ಎಸಗಿದ್ದು, ಸಂಚು ಕಾರ್ಯರೂಪಕ್ಕಿಳಿಸುವಾಗ ಪ್ರತ್ಯೇಕವಾಗಿ ಉಪ ತಂಡ ರಚಿಸಿಕೊಂಡು ಕಾರ್ಯನಿರ್ವಹಿಸಿವೆ. ಇದಕ್ಕೆ ಪೂರಕವಾದ ಪುರಾವೆಗಳು ಗೌರಿ ಅವರ ಕೊಲೆ ಪ್ರಕರಣದ ಆರೋಪಿಗಳ ಡೈರಿಯಲ್ಲಿ ಸಿಕ್ಕಿವೆ ಎಂದು ಮೂಲಗಳು ಹೇಳಿವೆ.

ಚಿಂತಕರ ಕೊಲೆಗಳಲ್ಲಿ ಕಾಳೆ ಪಾತ್ರ:  ಗೌರಿ ಅವರ ಹತ್ಯೆಯಲ್ಲಿ ಪ್ರಮುಖ ಸಂಚುಕೋರನಾಗಿರುವ ಅಮಿತ್‌ ಕಾಳೆ ಮೂಲತಃ ಪುಣೆಯವನಾಗಿದ್ದು, 2009ರಿಂದ ರಹಸ್ಯ ಕಾರ್ಯಸೂಚಿ ಹೊಂದಿರುವ ಧಾರ್ಮಿಕ ಸಂಘಟನೆಯೊಂದರ ಸಕ್ರಿಯ ಸದಸ್ಯನಾಗಿದ್ದಾನೆ. ಪ್ರಗತಿಪರರ ಹತ್ಯೆ ಸಲುವಾಗಿ 2014ರಿಂದ 2015ರವರೆಗೆ ಪುಣೆ ಮತ್ತು ಗೋವಾದಲ್ಲಿ ಕಾಳೆ ಹಾಗೂ ಅಮಿತ್‌ ದೇಗ್ವೇಕರ್‌ಗೆ ವಿಶೇಷ ತರಬೇತಿಯಾಗಿದೆ.

ಈ ಅವಧಿಯಲ್ಲಿ ಬಂದೂಕು ಬಳಕೆ ಹಾಗೂ ಕರ್ನಾಟಕದಲ್ಲಿ ಪ್ರಗತಿಪರ ಚಿಂತಕರ ಕೊಲೆ ಸಂಚು ಕಾರ್ಯಗತಗೊಳಿಸಲು ಹೇಗೆ ಸಂಘಟನೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಆತನಿಗೆ ಮಾಹಿತಿ ನೀಡಿರುವ ಸುಳಿವು ಸಿಕ್ಕಿದೆ. ಈ ಸಂಬಂಧ ಕಾಳೆ ಡೈರಿಯಲ್ಲಿ ಸಹ ಕೆಲವು ವಿಷಯಗಳು ಲಭ್ಯವಾಗಿವೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೀಗಾಗಿ ಕರ್ನಾಟಕದ ಚಿಂತಕರ ಕೊಲೆಗೆ ಮಹಾರಾಷ್ಟ್ರ ಮೂಲದ ಅಮೋಲ್‌ ಕಾಳೆ ಸಾರಥ್ಯ ವಹಿಸಿದ್ದರೆ, ಮಹಾರಾಷ್ಟ್ರದ ಚಿಂತಕರ ಕೊಲೆಗೆ ಮತ್ತೊಬ್ಬರು ಉಸ್ತುವಾರಿ ವಹಿಸಿರಬಹುದು. ಪುಣೆಯವನಾದ ಕಾರಣಕ್ಕೆ ಆತನನ್ನು ಅಲ್ಲಿನ ಎಡಪಂಥೀಯ ವಿಚಾರಧಾರೆ ಪ್ರತಿಪಾದಕ ನರೇಂದ್ರ ದಾಭೋಲ್ಕರ್‌ ಅವರ ಹತ್ಯೆ ಕೃತ್ಯದಲ್ಲಿ ಬಳಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಕಾಳೆ ಜಾತಿ ಬಗ್ಗೆ ಗೊಂದಲ:  ಈ ಪ್ರಕರಣದ ಪ್ರಮುಖ ಆರೋಪಿ ಅಮೋಲ್‌ ಕಾಳೆಯ ಜಾತಿ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಗೊಂದಲ ಉಂಟಾಗಿದೆ. ವಿಚಾರಣೆ ವೇಳೆ ಆತ ತಾನು ಮರಾಠಿಗ ಎಂದು ಹೇಳಿದ್ದಾನೆ. ಆದರೆ ಅವನ ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸಿದಾಗ ಲಿಂಗಾಯತ ಎಂಬುದು ಗೊತ್ತಾಯಿತು. ಈ ವಿಚಾರ ಖಚಿತಪಡಿಸಿಕೊಳ್ಳಲು ಮತ್ತಷ್ಟುವಿವರ ಕಲೆ ಹಾಕುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-

ಗೌರಿ ಅವರ ಕೊಲೆ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ನಮ್ಮ ಮಾವ ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿದ ಸುಳಿವು ಸಿಕ್ಕಿರುವ ಸಂಗತಿ ಗೊತ್ತಾಗಿದೆ. ಕರ್ನಾಟಕದ ಪೊಲೀಸರ ನೆರವು ಪಡೆದು ನಮ್ಮ ಮಾವನ ಹಂತಕರನ್ನು ಮಹಾರಾಷ್ಟ್ರದ ಎಸ್‌ಐಟಿ ಬಂಧಿಸಬೇಕು.

- ಮೇಧಾ ಪಾನ್ಸರೆ, ಗೋವಿಂದ ಪಾನ್ಸರೆ ಸೊಸೆ

loader