ಸೆ.5 , 2017 ರಂದು ಪತ್ರಕರ್ತೆ ಗೌರಿ ಲಂಕೇಶ್'ಗೆ ಗುಂಡು ಹಾರಿಸಿದ್ದ ಎಂದು ಪೊಲೀಸರಿಂದ ಮಾಹಿತಿ 14 ದಿನಗಳ ವಶಕ್ಕೆ ಪಡೆದಿರುವ ಎಸ್'ಐಟಿ
ಬೆಂಗಳೂರು[ಜೂ.12]: ದೇಶದಲ್ಲೇ ಸಂಚಲನ ಸೃಷ್ಟಿಸಿದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ರಾಜ್ಯ ಎಸ್ಐ'ಟಿ ತಂಡ ಯಶಸ್ಸು ಸಾಧಿಸಿದ್ದು ಗೌರಿಯವರಿಗೆ ಗುಂಡು ಹಾರಿಸಿದ್ದ ಹಂತಕನನ್ನು ಬಂಧಿಸಿದೆ.
ವಿಜಯಪುರದ ಸಿಂದಗಿ ಮೂಲದ ಪರುಶುರಾಮ್ ವಾಗ್ಮೋರೆ (26) ಬಂಧಿತ ಆರೋಪಿ. ನಿನ್ನೆ ಸಿಂದಗಿಯಲ್ಲಿ ಬಂಧಿಸಿರುವ ಎಸ್ಐಟಿ ತಂಡ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿ14 ದಿನಗಳ ವಶಕ್ಕೆ ಪಡೆದಿದೆ. ಆರೋಪಿಯು ವಕೀಲರನ್ನು ನೇಮಕ ಮಾಡಿಕೊಳ್ಳುವುದಾಗಿ ಕೋರ್ಟ್'ಗೆ ತಿಳಿಸಿದ್ದಾನೆ.
2017 ಸೆಪ್ಟೆಂಬರ್ 5 ರಂದು ಪರಶುರಾಮನೇ ಗೌರಿ ಅವರಿಗೆ ಗುಂಡು ಹಾರಿಸಿದ್ದು ಎಂದಿರುವ ಪೊಲೀಸರು ಸ್ಕೂಟರ್ ಚಲಾಯಿಸುತ್ತಿದ್ದ ಮತ್ತೊಬ್ಬ ಇನ್ನೂ ನಾಪತ್ತೆಯಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈಗಾಗಾಲೆ ಪ್ರಕರಣದಲ್ಲಿ ಮದ್ದೂರಿನ ಕೆ.ಟಿ. ನವೀನ್ ಕುಮಾರ್, ಶಿಕಾರಿಪುರದ ಸುಜಿತ್ ಸೇರಿದಂತೆ ಪ್ರಮುಖರನ್ನು ಬಂಧಿಸಿ ತನಿಖೆ ನಡೆಸುತ್ತಿದೆ.

9 ತಿಂಗಳ ನಂತರ ಬಂಧನ
2017, ಸೆ.5 ರಂದು ಗೌರಿ ಲಂಕೇಶ್ ಅವರು ಬಸವನಗುಡಿಯ ತಮ್ಮ ಕಚೇರಿಯಿಂದ ರಾಜರಾಜೇಶ್ವರಿಯ ಮನೆಗೆ ಸಂಜೆ 7 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಆಗಮಿಸಿ ಕಾರನ್ನು ಪಾರ್ಕ್ ಮಾಡುವಾಗ ಸ್ಕೂಟರ್'ನಲ್ಲಿ ಆಗಮಿಸಿದ ಇಬ್ಬರು ಹಂತಕರು ಗೌರಿಯವರ ಮೇಲೆ ಗುಂಡು ಹಾರಿಸಿ ಸ್ಥಳದಲ್ಲೇ ಹತ್ಯೆ ಮಾಡಿದ್ದರು. ಈ ಹತ್ಯೆ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಆಗಿನ ಸಿದ್ದರಾಮಯ್ಯ ಸರ್ಕಾರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಪ್ರಮುಖ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡು 100 ಮಂದಿಯ ಎಸ್ಐಟಿ ತಂಡವನ್ನು ರಚಿಸಿತ್ತು. ಆರಂಭದಲ್ಲಿ ಕೆಲ ತಿಂಗಳು ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಕಲೆ ಹಾಕಿ ಹಂತಕರಿಗೆ ನೆರವು ನೀಡಿದ ಮದ್ದೂರಿನ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಬಂಧಿಸಿತ್ತು. ಈತನಿಂದ ಹೆಚ್ಚು ಮಾಹಿತಿ ಕಲೆ ಹಾಕಿದ ವಿಶೇಷ ತನಿಖಾ ತಂಡ ಶೂಟರ್'ನನ್ನು ಕಡೆಗೂ ಬಂಧಿಸಿದೆ.
