ಹಠಾತ್ತಾಗಿ ಮನೆ ಮುಂದೆ ಅಪರಿಚಿತನ ಕಂಡ ಕೂಡಲೇ ಗೌರಿ ಅವರು ತಿರುಗಿ ಆತನನ್ನು ಮಾತನಾಡಿಸಲು ವಾಪಸ್ ಬರುತ್ತಾರೆ. ಆಗ ಆತ ಬ್ಯಾಗ್‌'ನಿಂದ ಪಿಸ್ತೂಲ್ ತೆಗೆಯುತ್ತಿದ್ದಂತೆಯೇ ಭಯಗೊಂಡ ಅವರು ತಕ್ಷಣ ಜೀವ ಉಳಿಸಿಕೊಳ್ಳಲು ಮನೆಯೊಳಗೆ ಓಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಹಂತಕ ಗೇಟ್ ಹತ್ತಿರ ನಿಂತುಕೊಂಡೇ ಗುಂಡಿನ ದಾಳಿ ನಡೆಸುತ್ತಾನೆ. ಹಾರಿಸಿದ ಮೊದಲ ನಾಲ್ಕು ಗುಂಡುಗಳು ಗೋಡೆಗೆ ಬಿದ್ದಿದ್ದರಿಂದ ತಕ್ಷಣ ಅವರ ಹತ್ತಿರಕ್ಕೆ ಹೋಗುತ್ತಾನೆ. ಎರಡು ಮೀಟರ್ ಅಂತರದಲ್ಲಿ ನಿಂತುಕೊಂಡೇ ಎದೆಗೆ ಎರಡು ಗುಂಡು ಹಾರಿಸಿದ್ದಾನೆ. ಇದರಿಂದ ಗೌರಿ ಕುಸಿದು ಬೀಳುತ್ತಾರೆ. ಕೂಡಲೇ ಎರಡು ಹೆಜ್ಜೆ ಮುಂದೆ ಹೋಗಿ ಮತ್ತೆ ಆತ ಕೆಳಗೆ ಬಿದ್ದು ನರಳಾಡುತ್ತಿದ್ದ ಗೌರಿ ಅವರಿಗೆ ಮತ್ತೊಂದು ಗುಂಡು ಹೊಡೆಯುತ್ತಾನೆ.
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿದ್ದು, ಗುಂಡು ಹಾರಿಸಿದ 25ರಿಂದ 28 ವರ್ಷ ವಯಸ್ಸಿನ 5.4 ಅಡಿ ಎತ್ತರದ ಹಂತಕನೊಬ್ಬನ ಅಸ್ಪಷ್ಟ ಗುರುತು ಪತ್ತೆಯಾಗಿದೆ. ಕಪ್ಪು ಬಣ್ಣದ ಜರ್ಕಿನ್, ಬ್ಯಾಗ್ ಹಾಗೂ ಹೆಲ್ಮೆಟ್ ಧರಿಸಿದ್ದ ಆತ, ಮಂಗಳವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಗೌರಿ ಅವರ ಮನೆ ಗೇಟ್ ಮೂಲಕ ಬಂದಿರುವ ಹಾಗೂ ಗೌರಿ ಅವರಿಗೆ ಸಮೀಪದಲ್ಲೇ ನಿಂತು ಗುಂಡಿನ ದಾಳಿ ನಡೆಸಿರುವ ದೃಶ್ಯಗಳು ಕ್ಯಾಮೆರಾದಲ್ಲಿವೆ. ಆದರೆ ಗುಣಮಟ್ಟ ಸರಿಯಿಲ್ಲದ ಕಾರಣ ತಂತ್ರಜ್ಞರ ನೆರವಿನಿಂದ ಆ ದೃಶ್ಯಗಳನ್ನು ಪೊಲೀಸರು ಅಭಿವೃದ್ಧಿಪಡಿಸುತ್ತಿದ್ದಾರೆ. ಹೀಗೆ ಅಭಿವೃದ್ಧಿಪಡಿಸಿದ ಭಾವಚಿತ್ರಗಳನ್ನು ತೆಗೆಸಿರುವ ಪೊಲೀಸರು, ಅವುಗಳನ್ನು ಇತರೆ ಪೊಲೀಸರಿಗೆ ರವಾನಿಸಿ ಆರೋಪಿಗಳ ಪತ್ತೆಗೆ ಸೂಚಿಸಿದ್ದಾರೆ.
13 ಸೆಕೆಂಡಲ್ಲಿ ಗುಂಡು ಹಾರಿಸಿ ಹೋದ: ಗಾಂಧಿ ಬಜಾರ್'ನಲ್ಲಿರುವ ತಮ್ಮ ಪತ್ರಿಕಾ ಕಚೇರಿಯಿಂದ ಕಾರಿನಲ್ಲಿ ರಾತ್ರಿ ಮನೆ ಹತ್ತಿರ ಬಂದ ಗೌರಿ ಅವರು, ಗೇಟ್ ಮುಂದೆ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಆನಂತರ ಗೇಟ್ ತೆಗೆದು ಒಳಗೆ ಹೋಗಿ, ಮನೆ ಬೀಗ ತೆಗೆಯಲು ಮುಂದಾಗುತ್ತಾರೆ. ಅದೇ ಸಮಯಕ್ಕೆ ಆಗಂತುಕನೊಬ್ಬ ಗೇಟ್ ಬಳಿ ಬಂದು ನಿಲ್ಲುತ್ತಾನೆ. ಹಠಾತ್ತಾಗಿ ಮನೆ ಮುಂದೆ ಅಪರಿಚಿತನ ಕಂಡ ಕೂಡಲೇ ಗೌರಿ ಅವರು ತಿರುಗಿ ಆತನನ್ನು ಮಾತನಾಡಿಸಲು ವಾಪಸ್ ಬರುತ್ತಾರೆ. ಆಗ ಆತ ಬ್ಯಾಗ್'ನಿಂದ ಪಿಸ್ತೂಲ್ ತೆಗೆಯುತ್ತಿದ್ದಂತೆಯೇ ಭಯಗೊಂಡ ಅವರು ತಕ್ಷಣ ಜೀವ ಉಳಿಸಿಕೊಳ್ಳಲು ಮನೆಯೊಳಗೆ ಓಡಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಹಂತಕ ಗೇಟ್ ಹತ್ತಿರ ನಿಂತುಕೊಂಡೇ ಗುಂಡಿನ ದಾಳಿ ನಡೆಸುತ್ತಾನೆ. ಹಾರಿಸಿದ ಮೊದಲ ನಾಲ್ಕು ಗುಂಡುಗಳು ಗೋಡೆಗೆ ಬಿದ್ದಿದ್ದರಿಂದ ತಕ್ಷಣ ಅವರ ಹತ್ತಿರಕ್ಕೆ ಹೋಗುತ್ತಾನೆ. ಎರಡು ಮೀಟರ್ ಅಂತರದಲ್ಲಿ ನಿಂತುಕೊಂಡೇ ಎದೆಗೆ ಎರಡು ಗುಂಡು ಹಾರಿಸಿದ್ದಾನೆ. ಇದರಿಂದ ಗೌರಿ ಕುಸಿದು ಬೀಳುತ್ತಾರೆ. ಕೂಡಲೇ ಎರಡು ಹೆಜ್ಜೆ ಮುಂದೆ ಹೋಗಿ ಮತ್ತೆ ಆತ ಕೆಳಗೆ ಬಿದ್ದು ನರಳಾಡುತ್ತಿದ್ದ ಗೌರಿ ಅವರಿಗೆ ಮತ್ತೊಂದು ಗುಂಡು ಹೊಡೆಯುತ್ತಾನೆ. ಅದು ಕಿಬ್ಬೊಟ್ಟೆಯನ್ನು ಹೊಕ್ಕುತ್ತದೆ. ನಂತರ ಗೇಟ್ ಮೂಲಕವೇ ಹೊರಗೆ ಓಡುತ್ತಾನೆ. ಹೀಗೆ ಕೇವಲ 13 ಸೆಕೆಂಡ್'ಗಳಲ್ಲಿ ಅವರ ಹತ್ಯೆ ನಡೆದಿದೆ. ಇಷ್ಟು ದೃಶ್ಯಗಳು ಗೌರಿ ಅವರ ಮನೆ ಮುಂದೆ ಹಾಕಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಕೃತ್ಯ ಎಸಗಿದ ನಂತರ ಹಂತಕ ಹೇಗೆ ಪರಾರಿಯಾದ ಎಂಬುದು ಗೊತ್ತಾಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಸಹಚರನೊಬ್ಬನ ಜತೆ ಬಿಳಿ ಬಣ್ಣದ ಹೊಂಡಾ ಆ್ಯಕ್ಟಿವಾ ಸ್ಕೂಟರ್'ನಲ್ಲಿ ಪರಾರಿಯಾಗಿದ್ದಾನೆ.
ದೇಹ ಹೊಕ್ಕಿತ್ತು 3 ಗುಂಡು: ಗೌರಿ ದೇಹಕ್ಕೆ 3 ಗುಂಡು ಹೊಕ್ಕಿದ್ದವು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಗೌರವ, ಅಂತ್ಯಕ್ರಿಯೆ: ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಬುಧವಾರ ಬೆಂಗಳೂರಿನ ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವದ ಬಳಿಕ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಮಾಡಲಾಯಿತು.
ಹತ್ಯೆಯ ವರದಿ ಕೊಡಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವಿವರ, ಅದರಲ್ಲಿ ಭಾಗಿಯಾದವರ ಪತ್ತೆಗೆ ತೆಗೆದುಕೊಂಡ ಕ್ರಮ ಸೇರಿ ಇಡೀ ಪ್ರಕರಣದ ಕುರಿತು ಕೇಂದ್ರವು ಕರ್ನಾಟಕದಿಂದ ವಿಸ್ತೃತ ವರದಿ ಕೇಳಿದೆ.
ದೇಶಾದ್ಯಂತ ಪ್ರತಿಭಟನೆ: ಗೌರಿ ಲಂಕೇಶ್ ಹತ್ಯೆಗೆ ದೇಶದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪಕ್ಷಭೇದ ಮರೆತು ರಾಜಕೀಯ ನಾಯಕರು, ಗಣ್ಯರು, ಚಲನಚಿತ್ರ ನಟರು, ಪತ್ರಕರ್ತರು ಹತ್ಯೆಯನ್ನು ಖಂಡಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
