ಬೆಂಗಳೂರು : ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸರ್ಕಾರಿ ನೌಕರನೊಬ್ಬನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಬಂಧಿಸಿದೆ. ಮಂಗಳೂರು ಮೂಲದ ರಾಜೇಶ್ ಬಂಗೇರಾ (50 ) ಬಂಧಿತ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ತಂಡ 13  ದಿನಗಳ ಕಾಲ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದೆ. ಈ ಮೂಲಕ
ಬಂಧಿತರ ಸಂಖ್ಯೆ ಹತ್ತಕ್ಕೇರಿದೆ.

ಈಗಾಗಲೇ ಬಂಧಿತನಾಗಿರುವ ಸುಳ್ಯದ ಸಂಪಾಜೆ ಯ ಮೋಹನ್ ನಾಯಕ್ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲ ಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದೆ. ಬಂಧಿತ ರಾಜೇಶ್ ಬಂಗೇರಾ ಶಿಕ್ಷಣ ಇಲಾಖೆಯ ನೌಕರನಾಗಿದ್ದು, ಕುಟುಂಬ ಮಡಿಕೇರಿಯಲ್ಲಿ ನೆಲೆಸಿದೆ.ನಾಟಿ ವೈದ್ಯ ಮೋಹನ್ ನಾಯಕ್ ಮತ್ತು ರಾಜೇಶ್ ಬಂಗೇರಾ ಸ್ನೇಹಿತರಾಗಿದ್ದರು. ರಾಜೇಶ್ ಸ್ನೇಹಿತನೊಬ್ಬ ಈಗಾಗಲೇ ಬಂಧನಕ್ಕೆ ಒಳ ಗಾಗಿರುವ ಪ್ರಕರಣದ ಪ್ರಮುಖ ಆರೋಪಿ ಪುಣೆಯ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್‌ಗೆ ಸ್ನೇಹಿತನಾಗಿದ್ದ. 

ಕಾಳೆಯ ಸ್ನೇಹಿತನ ಮೂಲಕ ರಾಜೇಶ್ ಮತ್ತು ಮೋಹನ್ ನಾಯಕ್ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆಯ ಸಂಪರ್ಕಕ್ಕೆ ಬಂದಿದ್ದರು. ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಕೃತ್ಯಕ್ಕೆ ಸಂಚು ರೂಪಿಸಿದ ತಂಡದಲ್ಲಿ ಇದ್ದರು.  ಹಂತಕರಿಗೆ ಬೇಕಾದ ನೆರವು ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಅಮೋಲ್ ಕಾಳೆ ಜತೆ ಈ ಇಬ್ಬರು ನೇರವಾಗಿ ಸಂಪರ್ಕದಲ್ಲಿದ್ದರು.

ಅಲ್ಲದೆ, ಪ್ರಮುಖ ಸಂಘಟನೆಗಳೊಂದಿಗೆ ಗುರುತಿಸಿ ಕೊಂಡಿದ್ದರು. ಎರಡು ದಿನಗಳ ಹಿಂದೆ ನೋಟಿಸ್ ನೀಡಿ ರಾಜೇಶ್ ಬಂಗೇರಾನನ್ನು ವಿಚಾರಣೆಗೆ ಕರೆಯಲಾಗಿತ್ತು. ಅಮೋಲ್ ಕಾಳೆ ಮತ್ತು ಹಂತಕರ ಜತೆ ಸಂಪರ್ಕದಲ್ಲಿರುವುದು ಸಾಕ್ಷ್ಯಗಳೊಂದಿಗೆ ದೃಢಪಟ್ಟ ಹಿನ್ನೆಲೆಯಲ್ಲಿ ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಡೈರಿಯಲ್ಲಿ ಸಿಕ್ಕಿದ ಮಾಹಿತಿ: ಅಮೋಲ್ ಕಾಳೆ ಬಳಿ ಜಪ್ತಿ ಮಾಡಲಾಗಿರುವ ಡೈರಿಯಲ್ಲಿ ಮೋಹನ್ ನಾಯಕ್ ಮತ್ತು ರಾಜೇಶ್ ಬಂಗೇರಾನಿಗೆ ಸಂಬಂಧಿಸಿದ ಕೆಲ ಮಾಹಿತಿಗಳು ಇದ್ದವು. ಇದರ ಬಗ್ಗೆ ಮಾಹಿತಿ ಕಲೆ ಹಾಕಿದ ಎಸ್‌ಐಟಿ ತಂಡ ಆರೋಪಿಗಳನ್ನು ಬಂಧಿಸಿದೆ. ಮೊದಲಿಗೆ ಮೋಹನ್ ನಾಯಕ್‌ನನ್ನು ಬಂಧಿಸಿದ ತಂಡ ಆತ ನೀಡಿದ ಸುಳಿವಿನ ಮೇರೆಗೆ ರಾಜೇಶ್ ಬಂಗೇರಾನನ್ನು ಬಲೆಗೆ ಕೆಡವಿದೆ. ಇನ್ನು ಮಂಗಳವಾರ ಮೋಹನ್ ನಾಯಕ್‌ನ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಆರೋಪಿಯನ್ನು ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಿದೆ.