ಗೌರಿ ಹಂತಕರ ಪೈಕಿ ನಾಲ್ವರು ಕಲ್ಬುರ್ಗಿ ಹಂತಕರು
ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿತರಾಗಿರುವ ಒಟ್ಟು12 ಮಂದಿ ಆರೋಪಿಗಳ ಪೈಕಿ ನಾಲ್ವರು ಕಲ್ಬುರ್ಗಿ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂಬುದು ಖಚಿತವಾಗಿದೆ.
ಬೆಂಗಳೂರು : ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬೈಕ್ ಚಾಲನೆ ಮಾಡಿದ್ದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ (27) ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲೂ ಹಂತಕರಿಗೆ ಬೈಕ್ ನೀಡಿರುವುದು ಸೇರಿದಂತೆ ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಅಗತ್ಯ ಸಾಕ್ಷ್ಯಗಳು ಲಭ್ಯವಾಗಿವೆ.
ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿತರಾಗಿರುವ ಒಟ್ಟು12 ಮಂದಿ ಆರೋಪಿಗಳ ಪೈಕಿ ನಾಲ್ವರು ಕಲ್ಬುರ್ಗಿ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂಬುದು ಖಚಿತವಾಗಿದೆ. ಗೌರಿ ಪ್ರಕರಣದ ತನಿಖೆಯ ಅಂತಿಮ ಘಟ್ಟಕ್ಕೆ ಬಂದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ವೇಳೆ ಕಲ್ಬುರ್ಗಿ ಪ್ರಕರಣಕ್ಕೆ ಬಂಧಿಸಿದಂತೆ ತಮಗೆ ಲಭ್ಯವಾಗಿರುವ ಮಹತ್ವದ ಅಂಶಗಳಿರುವ ವರದಿಯನ್ನು ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ನೀಡಿದೆ.
ವರದಿ ಸಲ್ಲಿಕೆಯಾಗಿರುವ ಸಂಗತಿಯನ್ನು ಸಿಐಡಿ ಎಡಿಜಿಪಿ ಕೆ.ಎಸ್. ಆರ್.ಚರಣ್‌ರೆಡ್ಡಿ ಅವರು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.
‘ಕಲ್ಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಗೌರಿ ಪ್ರಕರಣದ ವೇಳೆ ಸಿಕ್ಕ ಮಾಹಿತಿಯನ್ನು ಎಸ್‌ಐಟಿ ನೀಡಿದೆ. ವರದಿ ಆಧರಿಸಿ ಸಿಐಡಿ ತನಿಖೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.