ಲಂಕೇಶ್ ಪತ್ರಿಕೆಯನ್ನು ಸರ್ಕಾರದ ಸಹಾಯದಿಂದ ಪ್ರತಿಯೊಂದು ಶಾಲೆ- ಕಾಲೇಜುಗಳಿಗೆ ತಲುಪಿಸಬಹುದೇ ಎಂಬ ವಿಚಾರ ಭಾನುವಾರ ನಡೆದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಅದು ಕಾರ್ಯಸಾಧುವಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು ಎಂದು ಸಭೆ ಆಯೋಜಿಸಿದ್ದ ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ಸ್ಪಷ್ಟಪಡಿಸಿದೆ.
ಬೆಂಗಳೂರು: ಲಂಕೇಶ್ ಪತ್ರಿಕೆಯನ್ನು ಸರ್ಕಾರದ ಸಹಾಯದಿಂದ ಪ್ರತಿಯೊಂದು ಶಾಲೆ- ಕಾಲೇಜುಗಳಿಗೆ ತಲುಪಿಸಬಹುದೇ ಎಂಬ ವಿಚಾರ ಭಾನುವಾರ ನಡೆದ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಅದು ಕಾರ್ಯಸಾಧುವಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು ಎಂದು ಸಭೆ ಆಯೋಜಿಸಿದ್ದ ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ಸ್ಪಷ್ಟಪಡಿಸಿದೆ.
ಈ ಸಭೆಯಲ್ಲಿ ಸಿಎಂ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ಗೌರಿ ಲಂಕೇಶ್ ಪತ್ರಿಕೆಯನ್ನು ಸರ್ಕಾರದಿಂದಲೇ ನಡೆಸುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದ್ದಾಗಿ ಕನ್ನಡಪ್ರಭ ಸೇರಿದಂತೆ ಹಲವು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಮಟ್ಟು ಅವರು ಇಂತಹ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಭೆಯಲ್ಲಿ ಸಭಿಕರೊಬ್ಬರು ಈ ವಿಚಾರ ಪ್ರಸ್ತಾಪ ಮಾಡಿದಾಗ ಮಟ್ಟು ಅವರು, ‘ಲಂಕೇಶ್ ಪರಂಪರೆಯೆಂದರೆ ಜಾಹೀರಾತಿಲ್ಲದೇ ಮತ್ತು ಸರ್ಕಾರದ ಸಹಾಯವಿಲ್ಲದೇ ಪತ್ರಿಕೆ ನಡೆಸಿದ್ದು. ಅಂತಹ ಒಂದು ಸವಾಲನ್ನು ನಾವು ಈಗಲೂ ಸ್ವೀಕರಿಸಿ ಮುಂದುವರೆಯಬೇಕು.
ವಿಶೇಷವಾಗಿ ಹೆಚ್ಚೆಚ್ಚು ಓದುಗರನ್ನು ಮತ್ತು ಚಂದಾದಾರರನ್ನು ಹುಟ್ಟುಹಾಕುವ ಮೂಲಕ ಗೌರಿ ಮತ್ತು ಲಂಕೇಶ್‌ರ ಪರಂಪರೆಯನ್ನು ಉಳಿಸಿಕೊಳ್ಳಬೇಕೇ ವಿನಃ ಸರ್ಕಾರವನ್ನು ಆಧರಿಸಬಾರದು’ ಎಂದು ಹೇಳಿದರು.
ಸಭೆಯಲ್ಲಿ ಮೂರು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು. ಅವು: 1-ಗೌರಿ ಹಂತಕರನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ಡಿಸೆಂಬರ್ 5ರ ತನಕ ಗಡುವು. ಇಲ್ಲದಿದ್ದರೆ ಹೋರಾಟ ತೀವ್ರ.
2- ಗೌರಿ ಹೆಸರಿನಲ್ಲಿ ರಾಷ್ಟ್ರಮಟ್ಟದ ಒಂದು ಟ್ರಸ್ಟ್ ರಚಿಸಿ, ಅದರ ಮೂಲಕ ಪತ್ರಿಕೆಯನ್ನೂ, ಗೌರಿ ನೆನಪಿನ ಕಾರ್ಯಕ್ರಮಗಳನ್ನೂ ನಡೆಸುವ ಪ್ರಯತ್ನಗಳಿಗೆ ಬೆಂಬಲ ನೀಡುವುದು.
3- ಗೌರಿ ಹತ್ಯಾ ವಿರೋಧಿ ವೇದಿಕೆಯನ್ನು ಬರಖಾಸ್ತುಗೊಳಿಸಿ ಎಲ್ಲ ಸಮಾನ ಮನಸ್ಕರನ್ನು
ಒಟ್ಟುಗೂಡಿಸಿ ಜಿಲ್ಲಾ ಮಟ್ಟದಲ್ಲಿ ಗೌರಿ ಬಳಗವನ್ನು ಸ್ಥಾಪಿಸಲು ಮತ್ತು ಅದರ ಮೂಲಕ ಗೌರಿ ಪತ್ರಿಕೆ ಮತ್ತು ಇತರ ಚಟುವಟಿಕೆಗಳಿಗೆ ಬೇಕಾದ ಭೂಮಿಕೆ ರಚಿಸಿಕೊಳ್ಳಲು ನಿರ್ಣಯಿಸಲಾಯಿತು ಎಂದು ವೇದಿಕೆಯ ದೊಡ್ಡಿಪಾಳ್ಯ ನರಸಿಂಹಮೂರ್ತಿ ವಿವರಿಸಿದ್ದಾರೆ.
