ವಾಕರ್ ಸ್ಟಿಕ್’ನಲ್ಲಿ ಗಾಂಜಾ ಇಟ್ಟು ಕೈದಿಗೆ ಪೂರೈಕೆ

news | Monday, February 5th, 2018
Suvarna Web Desk
Highlights

ಜೈಲಿನಲ್ಲಿರುವ ಕೈದಿಗಳಿಗೆ ಊಟ, ಬಾಳೆ ಹಣ್ಣು, ಪಾದರಕ್ಷೆಯಲ್ಲಿ ಮಾದಕ ವಸ್ತು ಪೂರೈಸಿ ಸಿಕ್ಕಿ  ಬಿದ್ದಿದ್ದನ್ನು ಕೇಳಿದ್ದೇವೆ, ಆದರೆ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ವ್ಯಸನಿಗಳು ‘ವಾಕರ್ ’ನಲ್ಲಿ ಮಾದಕ ವಸ್ತು ಗಾಂಜಾ ಇಟ್ಟು ಕೈದಿಯೊಬ್ಬನಿಗೆ ತಲುಪಿಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಬಂಧಿಗೆ ಗಾಂಜಾ ನೀಡಲು ಹೋಗಿ ಇದೀಗ ಅವರೇ ಜೈಲು ಪಾಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವರದಿ : ಎನ್. ಲಕ್ಷ್ಮಣ್ – ಕನ್ನಡ ಪ್ರಭ

ಬೆಂಗಳೂರು : ಜೈಲಿನಲ್ಲಿರುವ ಕೈದಿಗಳಿಗೆ ಊಟ, ಬಾಳೆ ಹಣ್ಣು, ಪಾದರಕ್ಷೆಯಲ್ಲಿ ಮಾದಕ ವಸ್ತು ಪೂರೈಸಿ ಸಿಕ್ಕಿ  ಬಿದ್ದಿದ್ದನ್ನು ಕೇಳಿದ್ದೇವೆ, ಆದರೆ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ವ್ಯಸನಿಗಳು ‘ವಾಕರ್ ’ನಲ್ಲಿ ಮಾದಕ ವಸ್ತು ಗಾಂಜಾ ಇಟ್ಟು ಕೈದಿಯೊಬ್ಬನಿಗೆ ತಲುಪಿಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಬಂಧಿಗೆ ಗಾಂಜಾ ನೀಡಲು ಹೋಗಿ ಇದೀಗ ಅವರೇ ಜೈಲು ಪಾಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಪಟೇಗಾರ ಪಾಳ್ಯದ ಸಂಪತ್ ಕುಮಾರ್ (34) ಮತ್ತು ಗಾಯತ್ರಿ ನಗರದ ಸಂತೋಷ್ ಕುಮಾರ್ (27) ಎಂಬಾತನನ್ನು ಬಂಧಿಸಿ, ವಾಕರ್‌ನಲ್ಲಿದ್ದ ಸುಮಾರು ಅರ್ಧ ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಪ್ರಮುಖ ಆರೋಪಿ ಹರೀಶ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಪ್ರಕರಣ?: ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿ ಲೋಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ಜೈಲು ಸೇರುವ ಮುನ್ನವೇ ಲೋಕೇಶ್‌ನ ಕಾಲಿಗೆ ಗಾಯವಾಗಿದ್ದು, ಈತ ನಡೆದಾಡಲು ‘ವಾಕರ್’ ಬಳಸುತ್ತಿದ್ದ. ಜೈಲು ಸೇರಿದ ಮೇಲೆ ಈತ ಕುಂಟುತ್ತಲೇ ನಡೆಯುತ್ತಿದ್ದು, ಮಾದಕ ವ್ಯಸನಿ ಕೂಡ ಆಗಿದ್ದ. ಇತ್ತೀಚೆಗೆ ಆರೋಪಿಗಳಾದ ಸಂಪತ್ ಮತ್ತು ಕುಮಾರ್ ಜೈಲಿನಲ್ಲಿರುವ ಲೋಕೇಶ್ ಸಂದರ್ಶನಕ್ಕೆ ಬಂದಿದ್ದರು.

ಪರಪ್ಪನ ಕಾರಾಗೃಹದ ಸುತ್ತ ಕೆಎಸ್‌ಐಎಸ್‌ಎಫ್ (ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಸಂದರ್ಶಕರ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಸಂಪತ್ ಕೈನಲ್ಲಿದ್ದ ವಾಕರ್ ಬಗ್ಗೆ ಪ್ರಶ್ನಿಸಿದ್ದರು. ಜೈಲಿನಲ್ಲಿರುವ ಸ್ನೇಹಿತ ಲೋಕೇಶ್‌ಗೆ ನೀಡಲು ವಾಕರ್ ತಂದಿರುವುದಾಗಿ ಉತ್ತರಿಸಿದ್ದರು. ಇವರ ವರ್ತನೆಯಿಂದ ಇನ್ನಷ್ಟು ಅನುಮಾನಗೊಂಡ ಸಿಬ್ಬಂದಿ ವಾಕರ್‌ನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಗಾಂಜಾ ವಾಸನೆ ಬಂದಿದೆ. ಬಳಿಕ ವಾಕರ್ ಸರಳುಗಳ ತುದಿಯಲ್ಲಿ ಅಳವಡಿಸಲಾಗಿರುವ ರಬ್ಬರ್ ಕ್ಯಾಪ್ ಗಳನ್ನು ತೆಗೆದು ಪರಿಶೀಲಿಸಿದ್ದಾರೆ.

ಈ ವೇಳೆ ವಾಕರ್‌ನ ಸರಳುಗಳ ಒಳಗೆ ಗಾಂಜಾ ತುಂಬಿರುವ ಕವರ್‌ಗಳು ಹಾಕಿರುವುದು ಪತ್ತೆಯಾಗಿದೆ. ಕೂಡಲೇ ಭದ್ರತಾ  ಸಿಬ್ಬಂದಿ ಜೈಲು ಅಧಿಕಾರಿಗಳ ಗಮನಕ್ಕೆ ವಿಷಯ ತಂದು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪ್ರವೇಶ ಸುಲಭವಲ್ಲ: ಈ ಹಿಂದೆ ಪಪ್ಪಾಯಿ ಹಾಗೂ ಬಾಳೆ ಹಣ್ಣಿನಲ್ಲಿ ಮಾದಕ ವಸ್ತು ಇಟ್ಟು ಸಿಕ್ಕಿ ಬಿದ್ದಿದ್ದರು. ಇಂತಹ ಕುತಂತ್ರಗಳನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮಾದಕ ವಸ್ತು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಪ್ರವೇಶ ದ್ವಾರದಲ್ಲಿಯೇ ಸಿಕ್ಕಿ ಬೀಳುತ್ತಾರೆ. ಹೀಗಿದ್ದು, ಆಗಾಗ ಗಾಂಜಾ ಪೂರೈಸಲು ಯತ್ನಿಸುತ್ತಾರೆ ಎಂದು ಜೈಲು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

10 ಸಾವಿರಕ್ಕೆ ಕೃತ್ಯ ಜೈಲಿನಲ್ಲಿರುವ ಲೋಕೇಶ್‌ಗೆ ಗಾಂಜಾ ನೀಡಿದರೆ 10 ಸಾವಿರ ನೀಡುವುದಾಗಿ ಹರೀಶ್ ಎಂಬಾತ ಆಮಿಷವೊಡ್ಡಿದ್ದ. ವಾಕರ್‌ನಲ್ಲಿ ಗಾಂಜಾ ತೆಗೆದುಕೊಂಡು ಹೋಗಿ ನೀಡುವಂತೆ ಸೂಚಿಸಿದ್ದ. ಹಣದ ಆಸೆಗೆ ಬಿದ್ದು, ಕೃತ್ಯ ಎಸಗಿದ್ದಾಗಿ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಮದ್ಯದ ಬಾಟಲಿಯಲ್ಲಿಟ್ಟು ಎಸೆಯುತ್ತಾರೆ!

ಜೈಲಿನ ಬಳಿ ಬರುತ್ತಿದ್ದ ಕೈದಿಗಳ ಸಹಚರರು, ಗಾಂಜಾವನ್ನು ಮದ್ಯದ ಸಣ್ಣ-ಸಣ್ಣ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ರಾತ್ರಿ ವೇಳೆ ಜೈಲಿನೊಳಗೆ ಎಸೆಯುತ್ತಿದ್ದರು. ಇತ್ತೀಚೆಗೆ ಅಂತಹವೊಂದು ಪ್ರಕರಣ ಪತ್ತೆಯಾಗಿದೆ. ಕೈದಿಗಳನ್ನು ನೋಡಲು ಬರುವ ಸಹಚರರು ಮೊದಲೇ ನಿಗದಿತ ಸ್ಥಳದಲ್ಲಿ ಎಸೆಯುವುದಾಗಿ ಹೇಳಿರುತ್ತಾರೆ. ತಾವು ಊಟ ಇನ್ನಿತರ ಸಂದರ್ಭದಲ್ಲಿ ಹೊರಗೆ ಬಂದಾಗ ತೆಗೆದುಕೊಳ್ಳುವಂತೆ ಹೇಳಿರುತ್ತಾರೆ. ಭದ್ರತೆಯಲ್ಲಿ ತೊಡಗಿದ್ದಾಗ ಮದ್ಯದ ಬಾಟಲಿಯಲ್ಲಿ ಗಾಂಜಾ ಇಟ್ಟು ಎಸೆದಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Comments 0
Add Comment