Asianet Suvarna News Asianet Suvarna News

ಗದಗ್: ಹಿಂದೂ ಮುಸ್ಲಿಮರ ಭಾವೈಕ್ಯತೆಗೆ ಕಾರಣವಾಗಿದೆ ಕಳಸಾಪುರದ ಗಣೇಶೋತ್ಸವ

ದಿನನಿತ್ಯ ಜಾತಿ ಜಾತಿಗಳ ಹೆಸರಿನಲ್ಲಿ ಅನೇಕ ಗದ್ದಲ, ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಆದರೆ ಗದಗ ಜಿಲ್ಲೆ ಕಳಸಾಪೂರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಸೇರಿಕೊಂಡು ಭಾವೈಕ್ಯತೆಯ ಟ್ರಸ್ಟ್ ನಿರ್ಮಿಸಿದ್ದಾರೆ. ಹಿಂದೂ-ಮುಸ್ಲಿಂ ಒಟ್ಟಿಗೆ ಸೇರಿಕೊಂಡು ಗಣೇಶ ಹಬ್ಬ ಆಚರಿಸ್ತಾರೆ. ಜಾತಿ-ಭೇದಭಾವ ಮರೆತು ಎಲ್ಲರು ಒಂದೆ ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಅನ್ನೊ ಸಂದೇಶ ಸಾರುತ್ತಿದ್ದಾರೆ.. ಭಾವೈಕ್ಯತೆಯ ಗಣೇಶನ ವೈಭವದ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..

ganesha festival celebrated together by hindu and muslims at kalasapura gadag

ಗದಗ(ಆ. 27): ಮನಮೋಹಕವಾಗಿ ಪ್ರತಿಷ್ಠಾಪನೆಗೊಂಡಿರೋ ಗಣೇಶ. ಇನ್ನೊಂದೆಡೆ ವಿನಾಯಕನಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಿರುವ ಹಿಂದೂ-ಮುಸ್ಲಿಂ ಸಮಾಜದ ಮಹಿಳೆಯರು. ಇದಕ್ಕೆಲ್ಲಾ ಕಾರಣವಾಗಿರೋದು ಅಂಜುಮಾನ್ ಹಾಗೂ ಈಶ್ವರ ದೇವಾಲಯದ ಕಮಿಟಿ ಸದಸ್ಯರು. ಇದೆಲ್ಲಾ ನಡೆದಿರೋದು ಗದಗ ತಾಲೂಕಿನ ಕಳಸಾಪುರ ಗ್ರಾಮದಲ್ಲಿ. ಅದರಲ್ಲೂ ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು, ಹಿಂದೂಗಳ ಜೊತೆ ಸೇರಿ ವಿಘ್ನನಿವಾರಕನನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿತ್ಯವೂ ಇವರೆಲ್ಲಾ ಸಾಮೂಹಿಕವಾಗಿ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಳ್ತಾರೆ. ಸತತ 8 ವರ್ಷದಿಂದ ಅಂಜುಮಾನ್ ಏ -ಇಸ್ಲಾಂ ಹಾಗೂ ಈಶ್ವರ ದೇವಾಲಯ ಕಮಿಟಿಯವರು ಜಂಟಿಯಾಗಿ ಏಕದಂತನನ್ನ ಪೂಜೆ ಮಾಡ್ತಾರೆ. ಒಟ್ಟಿಗೆ ಹಬ್ಬ ಆಚರಿಸೋ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಶಾಂತಿಗೆ ಹೆಸರಾದ ಕಳಸಾಪೂರ ಗ್ರಾಮ ಈಗ ಭಾವೈಕ್ಯೆತೆಯ ಕೇಂದ್ರಬಿಂದುವಾಗಿದೆ. ಸತತ 8 ವರ್ಷಗಳಿಂದ ಇಲ್ಲಿನ ಹಿಂದೂಗಳು ಹಾಗೂ ಮುಸ್ಲಿಮರು ಸೇರಿ ವಿನಾಯಕನನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಕಳಸಾಪುರದ ಭಾವೈಕ್ಯತಾ ಗಣೇಶನು ಗ್ರಾಮಸ್ಥರಲ್ಲಿ ಒಗ್ಗಟ್ಟನ್ನು ಹೆಚ್ಚಿಸುತ್ತಿದ್ದಾನೆ. ಕಳಸಾಪುರದ ಹಿಂದೂ-ಮುಸ್ಲಿಂರೆಲ್ಲರೂ ಒಟ್ಟಾಗಿ ಎಲ್ಲಾ ಹಬ್ಬಗಳನ್ನ ಆಚರಿಸುವ ಮೂಲಕ ಸಬ್ ಕಾ ಮಾಲೀಕ್ ಏಕ್ ಹೈ ಅನ್ನೋ ಮಾತನ್ನು ಸಾಬೀತು ಮಾಡುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ಎಲ್ಲ ಹಬ್ಬಗಳನ್ನು ಇಲ್ಲಿನ ಜನರು ಜಾತಿ, ಮತ, ಪಂಥವಿಲ್ಲದೇ ಆಚರಣೆ ಮಾಡ್ತಾ ಬರುತ್ತಿರುವುದು ತುಂಬಾನೆ ಖುಷಿ ತರುತ್ತೆ ಎಂತಿದ್ದಾರೆ ಸ್ಥಳಿಯರು.

ಹನ್ನೊಂದು ದಿನಗಳ ಕಾಲ ಭಕ್ತಿಪೂರ್ವಕವಾಗಿ ಪೂಜೆ ಪುನಸ್ಕಾರ ಮಾಡ್ತಾರೆ. ಅಂಜುಮನ್ ಕಮಿಟಿ ಹಾಗೂ ಈಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು, ಎಲ್ಲಾ ಖರ್ಚುವೆಚ್ಚಗಳಿಗೆ ಮೊದಲೇ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ ಮಾಡಿರುತ್ತಾರೆ. ಒಟ್ಟಾರೆ, ಇಂತಹ ಸಾಮರಸ್ಯದ ಬದುಕು ಹಾಗೂ ಆಚರಣೆ ಎಲ್ಲರಿಗೂ ಎಲ್ಲಾಕಡೆ ಮಾದರಿಯಾಗಲಿ ಎಂಬುದು ನಮ್ಮ ಆಶಯ.

ವರದಿ: ಅಮೃತ ಅಜ್ಜಿ, ಸುವರ್ಣ ನ್ಯೂಸ್, ಗದಗ

Follow Us:
Download App:
  • android
  • ios