ಮಾಜಿ ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಪರಮೇಶ್ವರ್ ಟಾಂಗ್

G Parameshwar Support To CM Kumaraswamy
Highlights

ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸ ಬಜೆಟ್ ಮಂಡಿಸೋದು ವಾಡಿಕೆ ಎಂದು ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ಹೇಳುವ ಮೂಲಕ ಪರೋಕ್ಷವಾಗಿ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸ ಬಜೆಟ್ ಮಂಡಿಸೋದು ವಾಡಿಕೆ ಎಂದು ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ಹೇಳುವ ಮೂಲಕ ಪರೋಕ್ಷವಾಗಿ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಆದರೆ, ಪ್ರಸ್ತುತ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬಜೆಟ್ ಮಂಡಿಸಬೇಕಾ? ಇಲ್ಲಾ ಪೂರಕ ಬಜೆಟ್ ಮಂಡಿ ಸಬೇಕಾ ಎನ್ನುವುದನ್ನು ಸಮನ್ವಯ ಸಮಿತಿ ಸಭೆ ಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಭಾನುವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಹೊಸ ಬಜೆಟ್ ಮಂಡಿಸುವುದಾಗಿ ಹೇಳುತ್ತಿದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರಕ ಬಜೆಟ್ ಮಂಡಿಸಿದರೆ ಸಾಕು ಎನ್ನುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಒಂದು ಸರ್ಕಾರದ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಹೊಸ ಸರ್ಕಾರ ಅಧಿಕಾರ ಬಂದಾಗ ಹೊಸ ಬಜೆಟ್ ಮಂಡಿಸುವುದು ವಾಡಿಕೆ. 

ತನ್ನದೇ ಆದ ಹೊಸ ಕಾರ್ಯಕ್ರಮಗಳ ಘೋಷಣೆ ಮಾಡಬೇಕಾಗುತ್ತದೆ. ಆದರೆ, ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಪೂರಕ ಬಜೆಟ್ ಕುರಿತು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ನಾನೇನೂ ಹೆಚ್ಚು ಮಾತ ನಾಡು ವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಪೂರಕ ಬಜೆಟ್ ಮಂಡಿಸಬೇಕೋ? ಹೊಸ ಬಜೆಟ್ ಮಂಡಿಸಬೇಕೋ ಎಂಬುದನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.

ಕನಿಷ್ಠ ಕಾರ್ಯಕ್ರಮಕ್ಕೆ ಸಮಿತಿ ರಚನೆ: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಂದ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸದ ಹೊರತು ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಹಾಗಾಗಿ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲು ಒಂದು ಸಮಿತಿ ರಚನೆ ಮಾಡಿದ್ದೇವೆ ಎಂದು ಇದೇ ವೇಳೆ ಪರಮೇಶ್ವರ್ ಹೇಳಿದರು. ಉಭಯ ಪಕ್ಷಗಳ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಆಧರಿಸಿ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಹತ್ತು ದಿನಗಳಲ್ಲಿ  ಸಮಿತಿ ವರದಿ ನೀಡಲಿದ್ದು, ಬಳಿಕ ಅದನ್ನು ಸಮನ್ವಯ ಸಮಿತಿ ಸಭೆಯಲ್ಲಿಟ್ಟು ಚರ್ಚೆ ಮಾಡಿ ಅಂತಿಮಗೊಳಿಸಲಾಗುವುದು ಎಂದರು.

ಬಜೆಟ್ ಯೋಜನೆಗಳ ಬಗ್ಗೆ ಕಾಂಗ್ರೆಸಿಗರ ಸಭೆ: ಇನ್ನೆರಡು ದಿನದಲ್ಲಿ ಉಭಯ ಪಕ್ಷಗಳ ಸದಸ್ಯರ ನೇತೃತ್ವದಲ್ಲಿ ಸಾಮಾನ್ಯ ಕನಿಷ್ಠ  ಕಾರ್ಯಕ್ರಮಗಳ ಕಾರ್ಯಸೂಚಿ ಸಮಿತಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಸಮಿತಿಯ ಕಾಂಗ್ರೆಸ್ ಸದಸ್ಯರು ಭಾನುವಾರ ನಗರದಲ್ಲಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ಯಾವ್ಯಾವ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಸೇರಿಸಬೇಕು ಎಂದು ಚರ್ಚೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ನಗರದ ನಿವಾಸದಲ್ಲಿ ಸಭೆ ಸೇರಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ವೀರಪ್ಪ ಮೊಯ್ಲಿ ಮತ್ತಿತರ ಕಾಂಗ್ರೆಸ್ ಸದಸ್ಯರು ಪೂರ್ವಭಾವಿ ಮಾತುಕತೆ ನಡೆಸಿದರು. ಬಜೆಟ್‌ನಲ್ಲಿ ಕಾಂಗ್ರೆಸ್‌ನ ಕನಿಷ್ಠ ಕಾರ್ಯಕ್ರಮಗಳಾಗಿ ಯಾವ್ಯಾವ ಯೋಜನೆಗಳನ್ನು ಸೇರಿಸಬೇಕು. ಪಕ್ಷದ ಪ್ರಣಾಳಿಕೆಯಲ್ಲಿನ ಯಾವ್ಯಾವ ಭರವಸೆಗಳನ್ನು ಸೇರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಸಮ್ಮಿಶ್ರ ಸರ್ಕಾರವಾ ಗಿರುವುದರಿಂದ ಎರಡೂ ಪಕ್ಷಗಳ ಕಾರ್ಯಕ್ರಮ ಗಳನ್ನೂ ಬಜೆಟ್ ಒಳಗೊಳ್ಳಬೇಕಿದೆ. ಮಂಗಳವಾರ ಉಭಯ ಪಕ್ಷಗಳ ನೇತೃತ್ವದ ಕನಿಷ್ಠ ಕಾರ್ಯಕ್ರಮಗಳ  ಕಾರ್ಯಸೂಚಿ ಸಮಿತಿ ಸಭೆ ಇದೆ. ಹಾಗಾಗಿ ಕಾಂಗ್ರೆಸ್‌ನಿಂದ ಯಾವ್ಯಾವ  ಕನಿಷ್ಠ ಕಾರ್ಯಕ್ರಮ ಗಳನ್ನು ಬಜೆಟ್‌ನಲ್ಲಿ ಸೇರಿಸಬೇಕೆಂದು ಸಭೆ ಸೇರಿ ಚರ್ಚೆ ನಡೆಸಲಾಯಿತು. 

ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ತರಬೇಕಿದೆ. ಸುಮ್ಮನೆ ಬಜೆಟ್‌ನಲ್ಲಿ ಘೋಷಿಸಿ ಆಮೇಲೆ ಅವುಗಳನ್ನು ಜಾರಿಗೆ ತರದಿದ್ದರೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರಕ ಬಜೆಟ್ ಮಂಡಿಸಿದರೆ ಸಾಕು ಎನ್ನುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ  ಸರ್ಕಾರ ಉಭಯ ಪಕ್ಷಗಳ ನಾಯಕರ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉತ್ತಮ ಆಡಳಿತ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಒಟ್ಟಿಗೆ ಕೆಲಸ ಮಾಡಬೇಕು, ಕೆಲಸ ಮಾಡಲು ಬಿಡಬೇಕು ಎಂದರು.  

loader