ಬೆಂಗಳೂರು[ಆ.03]: ಮುಂದಿನ ದಿನದಲ್ಲಿ ಎದುರಾಗುವ ಉಪಚುನಾವಣೆ ಕುರಿತು ಕಾಂಗ್ರೆಸ್‌ ನಾಯಕರು ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಕಾಂಗ್ರೆಸ್‌ ಮುಖಂಡರು ಕೈಗೊಳ್ಳುವ ತೀರ್ಮಾನದ ಮೇಲೆ ಮೈತ್ರಿಯ ಭವಿಷ್ಯ ಅವಲಂಬಿಸಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ನಡೆದ ಸವಿತಾ ಸಮಾಜದ ವಿವಿಧ ಮುಖಂಡರ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಆದರೆ, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದು ಆ ಪಕ್ಷದ ಮುಖಂಡರು ಕೈಗೊಳ್ಳುವ ತೀರ್ಮಾನದ ಮೇಲೆ ಅವಲಂಬನೆಯಾಗಿರುತ್ತದೆ. ಅವರ ನಿರ್ಧಾರವನ್ನು ಎದುರು ನೋಡಲಾಗುತ್ತಿದೆ ಎಂದು ಹೇಳಿದರು.

ಒಟ್ಟು 17 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರದ ಶಾಸಕರು ಜೆಡಿಎಸ್‌ ಪಕ್ಷದವರಾಗಿದ್ದಾರೆ. ಉಳಿದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದವರಾಗಿದ್ದಾರೆ. ಶಾಸಕರ ಅನರ್ಹತೆ ಪ್ರಕರಣವು ಇನ್ನೂ ಸುಪ್ರೀಂಕೋರ್ಟ್‌ನಲ್ಲಿದ್ದು, ತೀರ್ಮಾನವಾಗಬೇಕು. ಹೀಗಾಗಿ ಈಗಲೇ ಉಪಚುನಾವಣೆಯ ಪೂರ್ವ ಮೈತ್ರಿ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸುಪ್ರೀಂಕೋರ್ಟ್‌ನ ತೀರ್ಪು ಬಂದ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.