ಬೆಂಗಳೂರು[ಜು.27]: ರಾಜಕೀಯ ನಾಯಕರು ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞರ ಅಣತಿಯಂತೆ ನಡೆಯುವುದು ಹೊಸತೇನಲ್ಲ. ಅದರಂತೆ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಅಧಿಕಾರ ಸ್ವೀಕರಿಸುವ ಮೊದಲು ತಮ್ಮ ಹೆಸರಿನಲ್ಲಿನ ಒಂದಕ್ಷರವನ್ನು ಬದಲಾವಣೆ ಮಾಡಿಕೊಂಡಿದ್ದಾರೆ.

ಅವರು ಈಗ ‘ಯಡ್ಯೂರಪ್ಪ’ ಬದಲಾಗಿ ಮತ್ತೆ ‘ಯಡಿಯೂರಪ್ಪ’ ಆಗಿದ್ದಾರೆ. ಯಡ್ಯೂರಪ್ಪ (Yeddyurappa) ಎಂದು ಕೆಲವು ವರ್ಷಗಳ ತಮ್ಮ ಹೆಸರನ್ನು ಅವರು ಬದಲಾಯಿಸಿಕೊಂಡಿದ್ದರು. ಆದರೆ, ಕನ್ನಡದಲ್ಲಿ ಬಳಸುವಾಗ ಮಾತ್ರ ಯಡಿಯೂರಪ್ಪ ಎಂತಲೇ ಇತ್ತು.

ಇದೀಗ ಶುಕ್ರವಾರ ಮಧ್ಯಾಹ್ನದ ವೇಳೆ ಟ್ವೀಟರ್ ಖಾತೆಯಲ್ಲಿ ಯಡಿಯೂರಪ್ಪ (Yediyurappa) ಎಂದು ಬದಲಾವಣೆ ಮಾಡಿಕೊಂಡರು. ಜ್ಯೋತಿಷಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಅವರು ಇಂಗ್ಲಿಷ್‌ನಲ್ಲಿದ್ದ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.