ಸ್ವಾತಂತ್ರ್ಯ ಹೋರಾಟ: ಜಿಹಾದ್‌ ಸಮರ್ಥಿಸಿದ ಇಮ್ರಾನ್‌ ಖಾನ್‌!

ಜಿಹಾದ್‌ ಸಮರ್ಥಿಸಿದ ಇಮ್ರಾನ್‌ ಖಾನ್‌!| ಸ್ವಾತಂತ್ರ್ಯ ಹೋರಾಟ ಎಂದ ಪಾಕ್‌ ಪ್ರಧಾನಿ| ಪುಲ್ವಾಮಾ ಕಾಶ್ಮೀರಿಯ ಕೃತ್ಯ| ಆದರೆ, ನಮ್ಮ ಬಗ್ಗೆ ಆರೋಪ| ಕಾಶ್ಮೀರ ವಿವಾದ: ಭಾರತದ ಮೇಲೆ ಗೂಬೆ ಕೂರಿಸಲು ಯತ್ನ

Freedom Fight Pakistan Prime Minister Imran Khan Justifies Jihad

 

ವಿಶ್ವಸಂಸ್ಥೆ[ಸೆ.28]: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಭಾರತದ ವಿರುದ್ಧ ಕಿಡಿಕಾರುತ್ತಲೇ ಇರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ನಿರೀಕ್ಷೆಯಂತೆಯೇ ವಿಶ್ವಸಂಸ್ಥೆಯಲ್ಲೂ ಈ ವಿಷಯ ಪ್ರಸ್ತಾಪಿಸುವ ಮೂಲಕ ಕಾಶ್ಮೀರ ಕ್ಯಾತೆ ತೆಗೆದಿದ್ದಾರೆ. ಅಷ್ಟುಮಾತ್ರವಲ್ಲ, ಕಾಶ್ಮೀರದಲ್ಲಿ ನಡೆಯುತ್ತಿರುವುದು ಸ್ವಾತಂತ್ರ್ಯ ಹೋರಾಟ. ಅದನ್ನು ಹತ್ತಿಕ್ಕಲು ಭಾರತ ಅಮಾನವೀಯ ಕಫä್ರ್ಯ ಹೇರಿಕೆ ಮಾಡಿದೆ ಎಂದು ಆರೋಪಿಸಿರುವ ಖಾನ್‌, ಕಫä್ರ್ಯ ಹಿಂಪಡೆದ ಬಳಿಕ ಮತ್ತೆ ಅಲ್ಲಿ ಪುಲ್ವಾಮಾ ಮಾದರಿ ದಾಳಿ ನಡೆದರೂ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಪ್ರಸಕ್ತ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆ ಹೀಗೆಯೇ ಮುಂದುವರೆದರೆ, ಭಾರತದ ಜೊತೆ ಯುದ್ಧ ಅನಿವಾರ್ಯವಾದರೂ ಆಗಬಹುದು. ಆಗ ಅಂತಿಮವಾಗಿ ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಹೋರಾಟ ಭಾರೀ ವಿನಾಶಕಾರಿ ಪರಿಣಾಮಕ್ಕೆ ಕಾರಣವಾಗಬಹುದು. ಅದು ವಿಶ್ವಸಂಸ್ಥೆಗೆ ನಿಜವಾಗಿಯೂ ಸತ್ವ ಪರೀಕ್ಷೆ ಆಗಲಿದೆ ಎನ್ನುವ ಮೂಲಕ ಮತ್ತೆ ಯುದ್ಧದ ಮಾತುಗಳನ್ನು ಆಡಿದ್ದಾರೆ.

ಮತ್ತೊಂದೆಡೆ ಇಸ್ಲಾಂ ಮೂಲಭೂತವಾದಿ ಭಯೋತ್ಪಾದನೆ ಎಂಬ ಪದ ಬಳಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಿರುಗೇಟು ನೀಡಿರುವ ಇಮ್ರಾನ್‌ ಖಾನ್‌, ವಿಶ್ವದಲ್ಲಿ ಒಂದೇ ಒಂದು ಇಸ್ಲಾಂ ಇದೆ. ನ್ಯೂಯಾರ್ಕ್ನಲ್ಲಿ ಕುಳಿತ ವ್ಯಕ್ತಿಯೊಬ್ಬ ಸಾಮಾನ್ಯ ಮುಸ್ಲಿಮರು ಮತ್ತು ಮೂಲಭೂತವಾದಿ ಮುಸ್ಲಿಮರು ಎಂದು ಹೇಗೆ ವಿಂಗಡಿಸುತ್ತಾರೆ? ಎಂದು ತಿರುಗೇಟು ನೀಡಿದ್ದಾರೆ.

ಭಾಷಣದಲ್ಲಿ ಕಾಶ್ಮೀರ ಕ್ಯಾತೆ:

ತಮ್ಮ ಭಾಷಣದಲ್ಲಿ ಭಾರತ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಷಯ ಪ್ರಸ್ತಾಪಿಸಿದ ಇಮ್ರಾನ್‌ ಖಾನ್‌, ಭಾರತದ ಕಾಶ್ಮೀರಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ‘ನಾವು ಅಧಿಕಾರಕ್ಕೆ ಬಂದಾಗ ಪಾಕಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ಪ್ರತಿಜ್ಞೆ ಕೈಗೊಂಡಿದ್ದೆವು. ನಾವು ಭಯೋತ್ಪಾದನೆಯ ವಿರುದ್ಧ ಹೋರಾಡಲು ನಾವು ಬಯಸಿದ್ದೆವು. ನಾವು ಈ ಹೋರಾಟದಲ್ಲಿ ಸಾವಿರಾರು ಜನರನ್ನು ಕಳೆದುಕೊಂಡಿದ್ದೇವೆ.

ನಾನು ಯುದ್ಧವನ್ನು ವಿರೋಧಿಸುತ್ತೇನೆ ಏಕೆಂದರೆ, 1980ರಲ್ಲಿ ನಾವು ಸೋವಿಯತ್‌ ಬೆಂಬಲಿತ ಪಾಶ್ಚಾತ್ಯ ದೇಶಗಳ ವಿರುದ್ಧ ಹೋರಾಡಿದೆವು. ಮುಜಾಹಿದ್ದೀನ್‌ ಸಂಘಟನೆಗೆ ಪಾಕಿಸ್ತಾನ ಸೇನೆ ತರಬೇತಿ ನೀಡಿತು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅವರಿಗೆ ವೇತನವನ್ನು ನೀಡಲಾಯಿತು. ಆದರೆ, ಸೋವಿಯತ್‌ ಒಕ್ಕೂಟ ಅವರನ್ನು ಭಯೋತ್ಪಾದಕರು ಎಂದು ಕರೆಯಿತು. ನಾವು ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯುತ್ತೇವೆ.

1989ರಲ್ಲಿ ಸೋವಿಯತ್‌ ಒಕ್ಕೂಟ ಸೋಲೊಪ್ಪಿಕೊಂಡಿತು. ಅಮೆರಿಕನ್‌ ಪಡೆ ವಾಪಸ್‌ ಆಯಿತು. ಆ ಬಳಿಕ ನಾವು ಮುಜಾಹಿದೀನ್‌ ಸಂಘಟನೆಯ ಸದಸ್ಯರಿಗೆ ವಿದೇಶಿ ಆಕ್ರಮಣದ ವಿರುದ್ಧ ಜಿಹಾದ್‌ ಉಪದೇಶ ನೀಡಿದೆವು. ಆದರೆ, ಅಮೆರಿಕ ಈಗ ನಮ್ಮ ವಿರುದ್ಧ ತಿರುಗಿಬಿದ್ದಿದೆ. ಇದು ನಮಗೆ ದುಃಸ್ವಪ್ನವಾಗಿದೆ. ನಾವು ಅವರಿಗೆ ಜಿಹಾದ್‌ ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳಬೇಕಾಗಿ ಬಂದಿದೆ.

ತಾಲಿಬಾನ್‌ ಅಷ್ಘಾನಿಸ್ತಾನದಲ್ಲಿದೆ. ಅಲ್‌ ಖೈದಾ ಕೂಡಾ ಅಲ್ಲಿಯದೇ. ಅದಕ್ಕೆ ಪಾಕಿಸ್ತಾನ ಏನು ಮಾಡಬೇಕು. ಈ ಗುಂಪುಗಳು ಪಾಕಿಸ್ತಾನದಲ್ಲಿವೆ ಎಂದು ಭಾರತ ಆರೋಪಿಸುತ್ತಿದೆ ಎಂದು ನನಗೆ ತಿಳಿದಿದೆ. ಈ ಕುರಿತು ಅನುಮಾನಗಳಿದ್ದರೆ ವಿಶ್ವಸಂಸ್ಥೆಯ ಮೇಲ್ವಿಚಾಕರು ಬಂದ ವೀಕ್ಷಣೆ ಮಾಡಲಿ. ನಾನು ಅವರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಪುಲ್ವಾಮಾ ದಾಳಿ ಮಾಡಿದ್ದು ಕಾಶ್ಮೀರಿಗ:

20 ವರ್ಷದ ಕಾಶ್ಮೀರಿ ಯುವಕನೊಬ್ಬ ಭಾರತೀಯ ಸೇನೆಯ ವಾಹನದ ಡಿಕ್ಕಿ ಹೊಡೆದು ತನ್ನನ್ನು ತಾನು ಸ್ಫೋಟಿಸಿಕೊಂಡ. ಆದರೆ, ಈ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಭಾರತ ಆರೋಪಿಸಿತು. ದಾಳಿಗೆ ಸಾಕ್ಷ್ಯಗಳನ್ನು ಒದಗಿಸಿ ಎಂದು ಮೋದಿ ಅವರಿಗೆ ತಿಳಿಸಿದೆವು. ಆದರೆ, ಭಾರತ ನಮ್ಮ ಮೇಲೆ ದಾಳಿ ನಡೆಸಿತು. ನಾವು ಪ್ರತಿಯಾಗಿ ದಾಳಿ ನಡೆಸಿದೆವು. ನಮ್ಮ ಹತ್ತು ಮರಗಳನ್ನು ಹೇಗೆ ಸಾಯಿಸಿದೆವು ಎಂದು ಮೋದಿ ದೊಡ್ಡದಾಗಿ ಪ್ರಚಾರ ಮಾಡಿದರು. ಇದು ಕೇವಲ ಟ್ರೈಲರ್‌, ಚಿತ್ರ ಇನ್ನೂ ಆರಂಭವಾಗಬೇಕಿದೆ’ ಎಂಬ ವಾಕ್ಯವನ್ನು ಅವರು ಬಳಸುತ್ತಾರೆ ಎಂದು ಇಮ್ರಾನ್‌ ಖಾನ್‌ ಆರೋಪಿಸಿದರು

Latest Videos
Follow Us:
Download App:
  • android
  • ios