ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌?

Free bus passes for all students across Karnataka
Highlights

ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸು ನೀಡುವ ಕಳೆದ ಸರ್ಕಾರದ ಘೋಷಣೆಯನ್ನು ಜಾರಿಗೊಳಿಸುವ ಬಗ್ಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಒಲವು ವ್ಯಕ್ತಪಡಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸು ನೀಡುವ ಕಳೆದ ಸರ್ಕಾರದ ಘೋಷಣೆಯನ್ನು ಜಾರಿಗೊಳಿಸುವ ಬಗ್ಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಒಲವು ವ್ಯಕ್ತಪಡಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸು ನೀಡುವ ಕಾರ್ಯಕ್ರಮ ಅತ್ಯುತ್ತಮವಾದದ್ದು. ಕಳೆದ ಸರ್ಕಾರದ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸು ನೀಡಲಾಗುತ್ತಿತ್ತು. ಈ ಬಾರಿಯೂ ಅದನ್ನು ಮುಂದುವರೆಸಲಾಗಿದೆ. ಕಳೆದ ಸರ್ಕಾರ ಕೊನೆಯ ಬಜೆಟ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸು ನೀಡುವ ಪ್ರಸ್ತಾವನೆ ಮಾಡಿತ್ತು. ಈ ಬಗ್ಗೆಯೂ ಇಲಾಖೆ ಒಲವು ಹೊಂದಿದೆ. ಆದರೆ, ಹಣಕಾಸು ಇಲಾಖೆಯು ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುತ್ತೇನೆ. ಉಚಿತ ಬಸ್‌ ಪಾಸಿಗೆ 19.60 ಲಕ್ಷ ವಿದ್ಯಾರ್ಥಿಗಳು ಅರ್ಹರಾಗಲಿದ್ದು, ಈಗಾಗಲೇ ಒಂದು ಲಕ್ಷ ಮಂದಿ ಹಣ ಪಾವತಿಸಿ ಪಾಸು ಖರೀದಿ ಮಾಡಿದ್ದಾರೆ. ಅಗತ್ಯ ಅನುದಾನ ಬಿಡುಗಡೆ ಮಾಡಿದರೆ ಕೂಡಲೇ ಉಚಿತ ಬಸ್‌ ಪಾಸು ವಿತರಣೆ ಮಾಡಲು ಸಾರಿಗೆ ಇಲಾಖೆ ಸಿದ್ಧವಾಗಿದೆ ಎಂದರು.

ಪ್ರಸ್ತುತ ರಿಯಾಯಿತಿ ದರದ ಬಸ್‌ ಪಾಸುಗಳ ಪೈಕಿ ಶೇ.50ರಷ್ಟುಹಣವನ್ನು ರಾಜ್ಯ ಸರ್ಕಾರ, ಶೇ.25ರಷ್ಟುಹಣವನ್ನು ಬಿಎಂಟಿಸಿ-ಕೆಎಸ್‌ಆರ್‌ಟಿಸಿ ನಿಗಮಗಳು ಹಾಗೂ ಶೇ.25ರಷ್ಟುಹಣವನ್ನು ಫಲಾನುಭವಿ ಭರಿಸುತ್ತಿದ್ದಾರೆ. ಉಚಿತ ಬಸ್‌ ಪಾಸಿಗಾಗಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯಿಂದ ಶೇ.25ರ ಬದಲಿಗೆ ಶೇ.35-40ರಷ್ಟುಹಣ ಒದಗಿಸಲು ನಾವು ಸಿದ್ಧರಿದ್ದೇವೆ. ಇದರಿಂದ ಪ್ರತಿ ವರ್ಷ 100 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಸಿದ್ಧರಿದ್ದೇವೆ. ಆದರೆ, ರಾಜ್ಯ ಸರ್ಕಾರದ ಪಾಲು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಯೋಜನೆಯಾದ್ದರಿಂದ ಶಿಕ್ಷಣ ಇಲಾಖೆಯೂ ಅನುದಾನ ನೀಡಿ ಕೈಜೋಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

loader