- ಖಾಸಗಿ ಶಾಲೆ ಮಕ್ಕಳಿಗಿಲ್ಲ  -ಇಂದೇ ಸಭೆ ನಡೆಸಿ ಆದೇಶ: ಮುಖ್ಯಮಂತ್ರಿ-ಲಕ್ಷಗಟ್ಟಲೆ ಡೊನೇಷನ್ ನೀಡುವ ಖಾಸಗಿ ಶಾಲೆ ಮಕ್ಕಳಿಗೇಕೆ ಬಸ್‌ಪಾಸ್?- ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ 

ಬೆಂಗಳೂರು (ಜು. 11):  ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾದ ಪ್ರಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ವಿತರಿಸಬೇಕೆಂಬ ಒತ್ತಾಯ ಬಹುತೇಕ ಮೂಲೆಗುಂಪಾಗುವ ಸಾಧ್ಯತೆಗಳು ದಟ್ಟವಾಗಿವೆ.

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಮಂಗಳವಾರವೇ ಅಧಿಕಾರಿ ಗಳ ಸಭೆ ನಡೆಸಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಎಂದು ಘೋಷಣೆ ಮಾಡಲಾಗಿತ್ತಾದರೂ ಹಣ ನಿಗದಿ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ ಎಂದು ವಿವರಿಸಿದರು. ಉಚಿತ ಬಸ್‌ಪಾಸ್ ವಿತರಣೆ ಮಾಡಲು ರಾಜ್ಯದ ಬೊಕ್ಕಸಕ್ಕೆ 900 ಕೋಟಿ ರು.ಗೂ ಅಧಿಕ ಹೊರೆಬೀಳುತ್ತದೆ ಎಂದರು.

ಬಿಜೆಪಿ ಪ್ರೇರಿತ ಪ್ರತಿಭಟನೆ: ಇದೇವೇಳೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೇಕೆ ಬಸ್‌ಪಾಸ್ ಎಂದು ಪ್ರಶ್ನಿಸಿದ ಸಿಎಂ, ₹೧ ಲಕ್ಷದವರೆಗೂ ಡೊನೇಷನ್ ನೀಡಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಬಸ್‌ಪಾಸ್ ಒಂದು ಹೊರೆಯಾಗುವುದಿಲ್ಲ ಅಭಿಪ್ರಾಯಪಟ್ಟರು ಬಿಜೆಪಿಯವರು ಎಬಿವಿಪಿ ಮೂಲಕ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸುತ್ತಿದ್ದಾರೆ. ರಾಜಕೀಯ ಮಾಡುವುದು ನನಗೆ ಗೊತ್ತಿಲ್ವಾ? ಮಂಗಳ ವಾರವೇ ಅಧಿಕಾರಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವೆ ಎಂದು ತಿಳಿಸಿದರು.