ಹರ್ಷ ಲೈಫ್‌ಲೈಟ್‌ ಷೇರು ವ್ಯವಹಾರ ಕಂಪನಿ ಹೆಸರಿನಲ್ಲಿ ಕಲಘಟಗಿ, ಧಾರವಾಡ, ಹುಬ್ಬಳ್ಳಿ ಸೇರಿ ವಿವಿಧೆಡೆ ಜನರಿಂದ ರೂ.400 ಕೋಟಿಗೂ ಅಧಿಕ ಹಣ ಬಾಚಿಕೊಂಡು ವಂಚಕರು ಪರಾರಿಯಾಗಿದ್ದು, ಪ್ರಮುಖವಾಗಿ ಶಿಕ್ಷಕರ ವೃತ್ತಿಯಲ್ಲಿರುವವರನ್ನೇ ಅವರು ಟಾರ್ಗೆಟ್‌ ಮಾಡಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಕಲಘಟಗಿಯಲ್ಲಿ 15 ವರ್ಷಗಳಿಂದ ಜೆರಾಕ್ಸ್‌ ಅಂಗಡಿ ಇಟ್ಟುಕೊಂಡಿದ್ದ ಪ್ರಮುಖ ಆರೋಪಿ ಸತ್ಯಬೋಧ ಖಾಸ್ನಿಸ್‌, ತನ್ನ ಸಹೋದರರ ಸಹಕಾರದಿಂದ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಕೈಯಲ್ಲಿ ಸ್ವಲ್ಪ ದುಡ್ಡು ಓಡಾಡಿದ್ದೇ ತಡ 2001ರಲ್ಲಿ ತಾಲೂಕಿನಲ್ಲೇ ಮೊದಲು ಹರ್ಷ ಲೈಫ್‌ಲೈಟ್‌ ಷೇರು ವ್ಯವಹಾರ ಕಂಪನಿ ಆರಂಭಿಸಿ ಅನೇಕ ವ್ಯಕ್ತಿಗಳ ಹೆಸರಿನಲ್ಲಿ ಡಿಮ್ಯಾಟ್‌ ಖಾತೆ ತೆರೆದು ವ್ಯಾಪಾರ ಮಾಡುತ್ತಿದ್ದ. ತನ್ನಲ್ಲಿ ಹಣ ಠೇವಣಿ ಇಡುವವರಿಗೆ ಕೆಲವು ವರ್ಷ .1 ಲಕ್ಷಕ್ಕೆ ಮಾಸಿಕ ಆರೇಳು ಸಾವಿರ ರು. ಬಡ್ಡಿ ನೀಡಿದ್ದ ಆರೋಪಿ ಕಲಘಟಗಿ, ಹುಬ್ಬಳ್ಳಿ, ಧಾರವಾಡದ ಜನರನ್ನು ನಂಬಿಸಿದ್ದ.

ಆದರೆ, ತೀರಾ ಕಷ್ಟಪಟ್ಟು ದುಡಿದ ಕೂಲಿಕಾರರು, ಬಡ ರೈತರು, ಸಣ್ಣ ವ್ಯಾಪಾರ​ಸ್ಥರ​ಷ್ಟೇ ಈಗ ತಮಗಾದ ಮೋಸವನ್ನು ಬಹಿ​ರಂಗ​​ಪಡಿಸಿದ್ದು, ಶಿಕ್ಷಕರೂ ಸೇರಿ ಮಹಿಳಾ ಸಂಘಗಳು, ವಕೀಲರು, ಹೊಟೇಲ್‌ ಮಾಲೀ​ಕರು, ವೈದ್ಯರು, ಅನೇಕ ಸರ್ಕಾರಿ ಸಂಘ​ಗಳು, ದೇವಾಲಯಗಳ ಸಮಿತಿಗಳು ಹಾಗೂ ಸ್ವತಃ ಪೊಲೀಸರೇ ಈ ಷೇರು ವ್ಯವಹಾರ ಕಂಪನಿ​ಯಲ್ಲಿ ಹಣ ಹೂಡಿದ್ದಾರೆ. ಆದರೆ, ವಂಚನೆ​ಗೊಳಗಾಗಿ ಮುಜುಗರಕ್ಕೀಡಾಗಿ​ರುವುದ​ರಿಂದ ಯಾರೂ ಈ ಬಗ್ಗೆ ಹೇಳಿಕೊಳ್ಳು​ತ್ತಿಲ್ಲ. ಇನ್ನು ಕೆಲವರಿಗೆ ತಮ್ಮ ಹುದ್ದೆಗೆ ಸಂಚಕಾರ ಭಯವೂ ಕಾಡಿದೆ ಎನ್ನಲಾಗಿದೆ.

ಕಲಘಟಗಿಯಲ್ಲಿ .1 ಕೋಟಿ ಮೌಲ್ಯದ ಮನೆ, ಹುಬ್ಬಳ್ಳಿ ರಸ್ತೆಯಲ್ಲಿ 50 ಎಕರೆ ಭೂಮಿ ಖರೀದಿಸಿ ಜನರನ್ನು ಯಾಮಾರಿಸಿದ್ದ ಖಾಸ್ನೀಸ್‌ ಕುಟುಂಬ, ಸದಾ ಸಜ್ಜನರಂತೆ ವರ್ತಿಸಿದ್ದರಿಂದ ಇವರ ಬಲೆಗೆ ಬೀಳದವರೇ ಇಲ್ಲ ಎಂಬಂತಾಗಿತ್ತು.
ಬಡ್ಡಿ ಆಸೆಗಾಗಿ ಇನ್ನು ಕೆಲವು ನೌಕರರು ಬ್ಯಾಂಕ್‌ನಿಂದ ಸಾಲ ಪಡೆದು ಈ ಕಂಪನಿಯಲ್ಲಿ ಹೂಡಿದ್ದರು ಎಂಬುದೂ ಗೊತ್ತಾಗಿದೆ.

ರೂ.500 ಹಾಗೂ ರೂ.1000 ಮುಖಬೆಲೆಯ ನೋಟು ರದ್ದಾಗಿದ್ದರಿಂದ 6 ತಿಂಗಳ ಬಳಿಕ ಬಡ್ಡಿ ಕೊಡುತ್ತೇವೆ ಎಂದು ಹೇಳಿದ್ದ ಖಾಸ್ನಿಸ್‌ ಕುಟುಂಬ ಈಗ ನಾಪತ್ತೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಧರ್ಮೇಂದ್ರ ಕುಮಾರ ಮೀನಾ ಅವರು, ತನಿಖೆಗಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ರಚಿಸಿದ್ದಾರೆ. ಮೂಲಗಳ ಪ್ರಕಾರ, ಖಾಸ್ನೀಸ್‌ ಕುಟುಂಬ ಮುಂಬೈನ ಪಂಚತಾರಾ ಹೊಟೇಲ್‌ನಲ್ಲಿದೆ ಎನ್ನಲಾಗಿದೆ.