ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಂತಕಟ್ಟೆ ಸಮೀಪ ತೋಟಗಾರಿಕಾ ಇಲಾಖೆಯ ಎದುರುಗಡೆಯಲ್ಲಿರುವ ಈ ಮನೆ ಇದೀಗ ಪ್ರೇತಗಳ ಬಿಡಿಸುವ ಕೇಂದ್ರವಾಗಿ ಬದಲಾಗಿದೆ. ಒಂದು ವರ್ಷಗಳ ಹಿಂದೆ ಎಲ್ಲಿಂದಲೋ ಬಂದ ಸುಬ್ರಹ್ಮಣ್ಯ ಎನ್ನುವ ಈ ಗುರೂಜಿಯೇ ಈ ಪ್ರೇತಗಳ ಉಚ್ಛಾಟಕ.
ಬೆಳ್ತಂಗಡಿ(ಮಾ.24): ಪ್ರೇತ ಬಿಡಿಸುತ್ತೇನೆಂದು ನಂಬಿಸಿ ಹೆಚ್ಚಾಗಿ ಮಹಿಳೆಯರನ್ನೇ ಮರಳು ಮಾಡುತ್ತಿರುವ ಗುರೂಜಿಯೊಬ್ಬ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿದ್ದಾನೆ.
ಸಾಯಿಬಾಬರ ನೇರ ಪುತ್ರ ಎಂದು ತನ್ನನ್ನು ತಾನೇ ಕರೆದುಕೊಳ್ಳುತ್ತಿರುವ ಈತ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಹಿಳೆಯರನ್ನು ಹಾಗೂ ಯುವತಿಯರನ್ನು ತನ್ನ ಮನೆಯಲ್ಲಿರಿಸಿ ಪ್ರೇತ ಬಿಡಿಸುವುದಾಗಿ ನಂಬಿಸಿ ಲೂಟಿ ಹೊಡೆಯುವ ಕಾಯಕದಲ್ಲಿ ತೊಡಗಿದ್ದಾನೆ. ಪ್ರೇತ ಉಚ್ಛಾಟನೆ ಮಾಡುತ್ತೇನೆಂದು ಮಹಿಳೆಯರ ಮೇಲೆ ಈತ ವಿಚಿತ್ರವಾಗಿ ದೌರ್ಜನ್ಯ ನಡೆಸುತ್ತಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಂತಕಟ್ಟೆ ಸಮೀಪ ತೋಟಗಾರಿಕಾ ಇಲಾಖೆಯ ಎದುರುಗಡೆಯಲ್ಲಿರುವ ಈ ಮನೆ ಇದೀಗ ಪ್ರೇತಗಳ ಬಿಡಿಸುವ ಕೇಂದ್ರವಾಗಿ ಬದಲಾಗಿದೆ. ಒಂದು ವರ್ಷಗಳ ಹಿಂದೆ ಎಲ್ಲಿಂದಲೋ ಬಂದ ಸುಬ್ರಹ್ಮಣ್ಯ ಎನ್ನುವ ಈ ಗುರೂಜಿಯೇ ಈ ಪ್ರೇತಗಳ ಉಚ್ಛಾಟಕ.
ಬಾಯಿ ತೆರೆದರೆ ಆ ಪ್ರೇತ ನನ್ನ ಕೈಯಲ್ಲಿದೆ, ಈ ಪ್ರೇತ ಆ ತೆಂಗಿನ ಕಾಯಿ ಒಳಗಿದೆ, ಇನ್ನೊಂದು ಪ್ರೇತ ಚೀಲದೊಳಗಿದೆ ಎಂದು ಈತನ ಮನೆಗೆ ಬಂದವರಿಗೆಲ್ಲಾ ಕಿವಿಯಲ್ಲಿ ಹೂವಿಡುವ ಈತನ ಮೈನ್ ಟಾರ್ಗೆಟ್ ಮಹಿಳೆಯರು ಮತ್ತು ಯುವತಿಯರು ಮಾತ್ರ. ತಮ್ಮ ಮನೆಯಲ್ಲಿ ಕಷ್ಟ ಇದೆ ಎಂದು ಈತನ ಬಳಿ ಹೋದರೆ ಮಾತ್ರ ಗೋವಿಂದ. ಬಳಿ ಬಂದವರಿಗೆ ಸಾಂತ್ವಾನ ಹೇಳುವ ಬದಲು ನಿಮ್ಮ ಮನೆಯಲ್ಲಿ ಪ್ರೇತದ ಉಪಟಲವಿದೆ ಎಂದು ಹೆದರಿಕೆ ಹುಟ್ಟಿಸುವುದರ ಜೊತೆಗೇ ಮಾತು ಆರಂಭಿಸುವ ಈ ಗುರೂಜಿ ಮನೆಯಲ್ಲಿರುವ ಮಹಿಳೆಯರ ಮೇಲೆ ಈ ಪ್ರೇತಗಳನ್ನು ಆಹ್ವಾನಿಸಿ ತಮ್ಮ ಸಂಕಷ್ಟ ಪರಿಹರಿಸುವುದಾಗಿ ಭರವಸೆಯನ್ನು ನೀಡುತ್ತಾನೆ.
ಬಳಿಕ ವಾರಗಟ್ಟಲೆ ಮಾನಸಿಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ತನ್ನ ಮಾತಿನ ಮೂಲಕ ಹಾಗೂ ಕೆಲವು ನಾಟಕಗಳ ಮೂಲಕ ಬುಟ್ಟಿಗೆ ಹಾಕಿಕೊಳ್ಳುವ ಈತ ಬಳಿಕ ಪೂಜೆ, ಹವನ ಮೊದಲಾದ ಹೆಸರಿನಲ್ಲಿ ಲೂಟಿ ಹೊಡೆಯಲು ಆರಂಭಿಸುತ್ತಿದ್ದಾನೆ. ನರ ದೌರ್ಬಲ್ಯದಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಮಹಿಳೆಯ ದೇಹದಲ್ಲಿ ಪ್ರೇತ ಬಂದಿದೆ ಎಂದು ನಂಬಿಸುವ ಈತ ಬಳಿಕ ಪ್ರೇತ ಬಿಡಿಸುವ ಹೆಸರಿನಲ್ಲಿ ಮಹಿಳೆಯರ ಮೇಲೆ ಅಸಹ್ಯ ಬರುವ ರೀತಿಯಲ್ಲಿ ದೌರ್ಜನ್ಯವನ್ನು ನಡೆಸುತ್ತಿದ್ದಾನೆ.
ತಾನು ಶಿರ್ಡಿ ಸಾಯಿಬಾಬರ ನೇರ ಪುತ್ರ ಎಂದು ಹೇಳಿಕೊಂಡು ಬರುತ್ತಿರುವ ಈತ ತನ್ನ ಕರೆದರೆ ಭೂತ, ಪ್ರೇತ ಹಾಗೂ ನಾಗ ತನ್ನ ಕೈ ಕೆಳಗೆ ಬಂದು ಕುಳಿತುಕೊಳ್ಳುತ್ತದೆ ಎನ್ನುತ್ತಾನೆ. ಪರಿಹಾರ ಕೇಳಿ ಈತನ ಬಳಿಗೆ ಬಂದವರಿಗೆ ಪ್ರೇತ ಹೇಗೆ ಬಿಡಿಸುವುದು ಎನ್ನುವ ಡೆಮೋವನ್ನೂ ಮಾಡಿ ತೋರಿಸುವ ಈತ ಈಗಾಗಲೇ ಆತನ ಮನೆಯಲ್ಲೇ ಇರುವ ಮಹಿಳೆಯನ್ನು ಎಲ್ಲರ ಮುಂದೆ ಕರೆದು ಬಳಿಕ ಆ ಮಹಿಳೆಯ ಮೇಲೆ ಪ್ರೇತ ಬರಿಸುತ್ತೇನೆಂದು ಆ ಮಹಿಳೆಯ ಮೇಲೆ ದೌರ್ಜನ್ಯವನ್ನು ನಡೆಸುವ ಚಾಳಿಯೂ ಈತನದ್ದಾಗಿದೆ. ಮಾತೆತ್ತಿದ್ದರೆ, ತಾನು ತನ್ನಲ್ಲಿರುವ ಶಕ್ತಿಯ ಮೂಲಕ ಸಂಕಷ್ಟದಲ್ಲಿರುವವರ ಸೇವೆ ಮಾಡುತ್ತಿರುವುದಾಗಿ ಪೋಸು ಕೊಡುವ ಈತ ತನ್ನ ಬಳಿಗೆ ಸಂಕಷ್ಟಕ್ಕಾಗಿ ಬರುವ ಯುವತಿಯರನ್ನು ಮತ್ತೆ ಅವರ ಮನೆಗೆ ಕಳುಹಿಸಲೂ ಒಪ್ಪದೇ, ಆತನ ಜೊತೆಗೇ ಇರುವಂತೆ ಮನೆ ಮಂದಿಯಲ್ಲಿ ಒತ್ತಡವನ್ನೂ ಹೇರುತ್ತಾನೆ.
ಈತನ ಈ ವರ್ತನೆಯನ್ನು ಕಂಡ ಕೆಲವು ಮಂದಿ ಈತನ ಸಹವಾಸವನ್ನೇ ಬಿಟ್ಟಿದ್ದಾರೆ. ಆದರೆ ಕೆಲವು ಮಹಿಳೆಯರನ್ನೂ ಈಗಾಗಲೇ ತನ್ನ ಬುಟ್ಟಿಗೆ ಹಾಕಿಕೊಂಡಿರುವ ಈ ಸೋಕಾಲ್ಡ್ ಗುರೂಜಿ ಅಂಥ ಮಹಿಳೆಯರ ಮೂಲಕವೇ ತನ್ನ ಪ್ರೇತ ಉಚ್ಛಾಟನೆಯ ಪ್ರಚಾರವನ್ನೂ ಪಡೆದುಕೊಳ್ಳುತ್ತಿದ್ದಾನೆ. 21 ನೇ ಶತಮಾನದಲ್ಲಿರುವ ಹಾಗೂ ಬುದ್ಧಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಂತಹ ಗುರೂಜಿ ತನ್ನ ಕುತಂತ್ರವನ್ನು ಮುಂದುವರಿಸಿದ್ದು, ಜನತೆ ಈತನ ಬಗ್ಗೆ ಇನ್ನಾದರೂ ತಿಳಿಯಬೇಕಿದೆ.
