ನಮ್ಮ ಮೆಟ್ರೋ ಯೋಜನೆ ವೀಕ್ಷಿಸುವ ಉತ್ಸಾಹ ತೋರಿದ ಫ್ರಾನ್ಸ್‌'ನ ನಿಯೋಗ, ಯಾವುದೇ ಭದ್ರತೆ ಇಲ್ಲದೇ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿದ್ದು ಗಮನ ಸೆಳೆಯಿತು.

ಬೆಂಗಳೂರು: ಫ್ರಾನ್ಸ್‌ ದೇಶದ ವಿದೇಶಾಂಗ ಸಚಿವ ಜೀನ್‌ ಮಾರ್ಕ್ ಆಯ್‌ರಾಲ್ಟ್‌ ನೇತೃತ್ವದ ನಿಯೋಗ ಸೋಮವಾರ ಬೆಳಗ್ಗೆ ವಿಧಾನಸೌಧದ ಎದುರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಮೆಟ್ರೊ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದವರೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿತು.

ನಮ್ಮ ಮೆಟ್ರೋ ಯೋಜನೆಗೆ ಫ್ರಾನ್ಸ್‌ ಸರ್ಕಾರ ಕೂಡ ಆರ್ಥಿಕ ನೆರವು ನೀಡಿದ್ದು, ಅಲ್ಲಿನ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. 

ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಯೋಜನೆ ವೀಕ್ಷಿಸುವ ಉತ್ಸಾಹ ತೋರಿದ ನಿಯೋಗ, ಯಾವುದೇ ಭದ್ರತೆ ಇಲ್ಲದೇ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿದ್ದು ಗಮನ ಸೆಳೆಯಿತು. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಜತೆಗಿದ್ದರು.

ಡಾ.ಅಂಬೇಡ್ಕರ್‌ ಮೆಟ್ರೋ ನಿಲ್ದಾಣಕ್ಕೆ ಬಂದ ನಿಯೋಗದ ಸದಸ್ಯರು, ಖುದ್ದಾಗಿ ಪ್ರವೇಶದ ಟೋಕನ್‌ ಪಡೆದು, ನಿಲ್ದಾಣ ಪ್ರವೇಶಿಸಿದರು. ನಂತರ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದವರೆಗೆ ಪ್ರಯಾಣಿಸಿದರು. ಅಲ್ಲಿಂದ ರಂಗೋಲಿ ಮೆಟ್ರೋಗೆ ತೆರಳಿ, ಕರಕುಶಲ ವಸ್ತುಗಳನ್ನು ವೀಕ್ಷಿಸಿದರು. ನಂತರ ಚರ್ಚ್ ಸ್ಟ್ರೀಟ್‌'ವರೆಗೆ ನಡೆದೇ ಸಾಗಿದರು.

ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಫ್ರಾನ್ಸ್‌ ವಿದೇಶಾಂಗ ಸಚಿವ ಜೀನ್‌ ಮಾರ್ಕ್, ಮೆಟ್ರೋಗಾಗಿ ಭಾರತದಲ್ಲಿ ಅಲ್ಸಾಟನ್‌, ಥ್ಯಾಲ್ಸಿ, ಸಿಸ್ಟ್ರಾ ಎಂಬ ಫ್ರೆಂಚ್‌ ಕಂಪನಿಗಳು ಕೆಲಸ ಮಾಡುತ್ತಿವೆ. ಬಿಎಂಆರ್‌'ಸಿಎಲ್‌ ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಯಶಸ್ವಿ ವಹಿವಾಟು ಹೊಂದಿದೆ. ನಾವು ಕೂಡ ಅನುಭವವಿಲ್ಲದ ಚಾಲಕರಂತೆ ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದೇವೆ. ಉಭಯ ರಾಷ್ಟ್ರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಮತ್ತಷ್ಟುಮೆಟ್ರೋ ಸೇವೆಯ ಅಗತ್ಯವಿದೆ. ಹೀಗಾಗಿ ಸಹಭಾಗಿತ್ವವನ್ನು ಕೂಡ ವಿಸ್ತರಿಸಬೇಕಾಗಿದೆ ಎಂದರು.

ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ನಡೆಸಿದ ಸಭೆ ಸಕಾರಾತ್ಮಕವಾಗಿತ್ತು. ಈ ವೇಳೆ ರಕ್ಷಣಾ ವಿಭಾಗ, ವೈವಿಧ್ಯ ಇಂಧನ, ಅರ್ಥ ವ್ಯವಸ್ಥೆ ಹಾಗೂ ತಂತ್ರಜ್ಞಾನದಲ್ಲಿ ಭಾರತದೊಂದಿಗೆ ಫ್ರಾನ್ಸ್‌ ವ್ಯವಹರಿಸುವ ಅಗತ್ಯವಿದೆ ಎಂಬುದು ಮನವರಿಕೆಯಾಗಿದೆ. 

ಭಾರತದ ಅರ್ಥ ವ್ಯವಸ್ಥೆ ಭದ್ರಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಗಮನಿಸಿ​ದ್ದೇನೆ. ಭಾರತ ಸಾಗುತ್ತಿರುವ ಬದಲಾವಣೆಗಳ ಪಥದಲ್ಲಿ ಫ್ರಾನ್ಸ್‌ ಕೂಡ ಸಾಗಬೇಕಾದರೆ ಅತಿ ಹೆಚ್ಚು ಸಮಯ ಬೇಕಾಗುತ್ತದೆ ಎಂದರು.

(epaper.kannadaprabha.in)