ಮಂಗಳೂರು(ಮಾ. 04)  ಅನಾರೋಗ್ಯಕ್ಕೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ಧನಂಜಯ್ ಕುಮಾರ್ ವಿಧಿವಶರಾಗಿದ್ದಾರೆ.

ಆರೋಗ್ಯ ತೀರಾ ಬಿಗಡಾಯಿಸಿ ಧನಂಜಯ್ ಕುಮಾರ್ ಕೋಮಾ ಸ್ಥಿತಿಗೆ ಜಾರಿದ್ದರು .ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವಿ. ಧನಂಜಯ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿ ಕೆಲಸ ಮಾಡಿದ್ದರು.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1951 ರಲ್ಲಿ ಜನಿಸಿದ ಕುಮಾರ್  ಕಾನೂನು ಮತ್ತು ವಿಜ್ಞಾನ ವಿಭಾದಲ್ಲಿ ಪದವಿ ಪಡೆದುಕೊಂಡಿದ್ದರು. 

ಅಟಲ್ ಸರ್ಕಾರದಲ್ಲಿ ಸಚಿವರಾಗಿದ್ದ ಧನಂಜಯ್ ಕುಮಾರ್ ವಿಧಿವಶ

1991ರಲ್ಲಿ ಲೋಕಸಭೆಗೆ ಮೊದಲ ಸಾರಿ ಆಯ್ಕೆಯಾಗಿದ್ದ ಕುಮಾರ್ ಕೇಂಧ್ರದ ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದುಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯನ್ನು ಸಂಘಟನೆ ಮಾಡಿದವರಲ್ಲಿ ಧನಂಜಯ್ ಹೆಸರು ಮೊದಲಿಗೆ ನಿಲ್ಲುತ್ತದೆ.ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ವಿ.ಧನಂಜಯ ಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು.

ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ವೇಳೆ ಧನಂಜಯ್ ಕುಮಾರ್ ಬಿಎಸ್ ವೈ ಅವರೊಂದಿಗೆ ತೆರಳಿದ್ದರು.  ಬಿಜೆಪಿಯಲ್ಲಿ ರಾಜಕೀಯ ಜೀವನ ಆರಂಭಿಸಿದ ಧನಂಜಯ್ ಕುಮಾರ್, ಶಾಸಕರಾಗಿ, ಸಂಸದರಾಗಿ, ಆಯ್ಕೆಯಾಗಿದ್ದರು. ತಮ್ಮ ರಾಜಕಾರಣದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಸೇರಿದ್ದ ಧನಂಜಯ್ ಕುಮಾರ್ ಅವರನ್ನು ಅನಾರೋಗ್ಯ ಕಾಡಿತ್ತು.