ಬೆಂಗಳೂರು[ಆ.01]: ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಸಿಗುವ ಮೊದಲೇ ದೇಶ ವಿಭಜನೆ ಮಾಡಿದ್ದರು. ರಾಷ್ಟ್ರಕ್ಕೆ ಬಿಜೆಪಿಯವರ ಯಾವ ತ್ಯಾಗ ಬಲಿದಾನವೂ ಇಲ್ಲ. ಆದರೆ, ಅವರೇ ಇಂದು ದೇಶಪ್ರೇಮಿಗಳಾಗಿದ್ದಾರೆ, ನಾವು ಬೇಕೂಫ್‌ಗಳಾಗಿದ್ದೇವೆ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತೀವ್ರ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗಷ್ಟೆರಾಜೀನಾಮೆ ಸಲ್ಲಿಸಿದ್ದ ರಮೇಶ್‌ ಕುಮಾರ್‌ ಗುರುವಾರ ಕೆಪಿಸಿಸಿ ಕಚೇರಿಗೆ ಆಗಮಿಸಿ ಮತ್ತೆ ಪಕ್ಷದ ಸದಸ್ಯತ್ವ ಪಡೆದುಕೊಂಡರು. ಈ ವೇಳೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯಕ್ಕೂ ಮೊದಲೇ ಈ ದೇಶವನ್ನು ವಿಭಜಿಸಿದ್ದರು. ರಾಷ್ಟ್ರಕ್ಕೆ ಬಿಜೆಪಿಯವರ ಯಾವ ತ್ಯಾಗ, ಬಲಿದಾನವೂ ಇಲ್ಲ. ಆದರೆ, ಇಂದು ಅವರೇ ರಾಷ್ಟ್ರಪ್ರೇಮಿಗಳಾಗಿದ್ದಾರೆ. ನಾವೆಲ್ಲಾ ಬೇಕೂಫ್‌ಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟುಕಾಂಗ್ರೆಸ್ಸಿಗರು ಪ್ರಾಣತ್ಯಾಗ ಮಾಡಿದ್ದಾರೆ. ಸಿಪಾಯಿ ದಂಗೆ ವೇಳೆ ಆರ್‌ಎಸ್‌ಎಸ್‌ನವರು ಎಲ್ಲಿದ್ದರು? ದೇಶಕ್ಕೆ ಬಿಜೆಪಿಯವರ ತ್ಯಾಗ, ಬಲಿದಾನಗಳೇನು ತಿಳಿಸಲಿ ಎಂದರು.

ಏನು ಮಾಡ್ತಾರೆ ನೋಡೋಣ:

ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ಎಲ್ಲಿಯವರೆಗೆ ಸರ್ಕಾರ ಮಾಡ್ತಾರೆ, ಏನೇನು ಮಾಡ್ತಾರೆ ನೋಡೋಣ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವೇ ಪ್ರಬಲ. ರಾಜ್ಯ ಮತ್ತು ರಾಷ್ಟ್ರದಲ್ಲಿ ಪಕ್ಷವನ್ನ ಮತ್ತೆ ಬಲಗೊಳಿಸಬೇಕು. ಸೋನಿಯಾಗಾಂಧಿ ಅವರು ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದವರು. ರಾಹುಲ್‌ ಗಾಂಧಿ ಅವರು ಲೋಕಸಭಾ ಚುನಾವಣಾ ಸೋಲಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನೇ ಬಿಟ್ಟರು. ಆದರೆ, ನಾವು ಇಲ್ಲಿ ವೈಯುಕ್ತಿಕ ಕಾರಣಗಳಿಗೆ ಕಿತ್ತಾಡುತ್ತಿದ್ದೇವೆ. ಆಡಂಬರದ ಬದುಕನ್ನು ಬಿಡಬೇಕು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಬಾರದು. ನಾಲ್ಕು ಗೋಡೆಗಳ ಮಧ್ಯೆ ಎಲ್ಲವೂ ಮುಗಿಯಬೇಕು ಎಂದು ಹಿತವಚನ ನೀಡಿದರು.

ಇಂದು ನಾವು ನಮ್ಮ ಪಕ್ಷದ ಇತಿಹಾಸವನ್ನೇ ಮರೆತಿದ್ದೇವೆ. ನಮ್ಮ ಪಕ್ಷದ ನಾಯಕರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಜನರಿಗೆ ನೆನಪಿಸುತ್ತಿಲ್ಲ. ನಮ್ಮ ಕಾರ್ಯಕರ್ತರಲ್ಲಿ ನೈತಿಕತೆ ಕುಸಿದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಎಂದರು.

ಫೈವ್‌ ಸ್ಟಾರ್‌ ಕಲ್ಚರ್‌ ಬೇಡ:

ನಾವು ಫುಟ್ಪಾತ್‌ನಲ್ಲಿ ಚಿತ್ರಾನ್ನ ತಿಂದು ಬಂದವರು. ಆದರೆ ಪಕ್ಷಕ್ಕೆ ಇಂದು ಫೈವ್‌ ಸ್ಟಾರ್‌ ಕಲ್ಚರ್‌ ಬಂದಿದೆ. ನಮಗೆ ಫೈವ್‌ ಸ್ಟಾರ್‌ ಸಂಸ್ಕೃತಿ ಬೇಡ ಎಂದು ಇದೇ ವೇಳೆ ಇತ್ತೀಚಿನ ಕಾಂಗ್ರೆಸ್‌ ಶಾಸಕರ ಸ್ಟಾರ್‌ ಹೋಟೆಲ್‌ ಮತ್ತು ರೆಸಾರ್ಟ್‌ ರಾಜಕೀಯದ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಹೆಸರಿಗೆ ಫೈವ್‌ ಸ್ಟಾರ್‌ ಅಷ್ಟೇ, ಒಳಗೆ ಹಳಸಿದ್ದೇ ಸಿಗೋದು. ಹಾಗಾಗಿ ನಮಗೆ ಆ ಫೈವ್‌ ಸ್ಟಾರ್‌ ಸಂಸ್ಕೃತಿ ಬೇಡ. ಬೀದಿಯಲ್ಲಿ ನಿಂತು ಒಟ್ಟಾಗಿ ದುಡಿಯೋಣ ಎಂದು ಸಲಹೆ ನೀಡಿದರು.

ಅತೃಪ್ತರು ಮರ್ಯಾದೆ ತೆಗೆದು ಹೋದರು

ಕೋಟಿಯುಳ್ಳವರಿಗೆ ನಾವು ಪಕ್ಷದಿಂದ ಟಿಕೆಟ್‌ ನೀಡಿ ಗೆಲ್ಲಿಸಿದ್ದಕ್ಕೆ ಅವರು 10 ಲಕ್ಷಕ್ಕೆ ನಮ್ಮ ಮಾನ ಮರ್ಯಾದೆ ತೆಗೆದು ಹೋದರು. ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದೇನೆ. ಮುಂದಿನದ್ದು ಜನರಿಗೇ ಬಿಟ್ಟಿದ್ದೇನೆ. ಅವರೇ ನನ್ನ ತೀರ್ಪು ಸರಿಯೇ ತಪ್ಪೇ ಎಂದು ಮುಂದೆ ತೀರ್ಮಾನಿಸುತ್ತಾರೆ ಎಂದು ಇದೇ ವೇಳೆ ರಮೇಶ್‌ ಕುಮಾರ್‌ ಹೇಳಿದರು. ಅತೃಪ್ತರ 17 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬಹುದು.

ಬೂತ್‌ ಮಟ್ಟದಲ್ಲಿ ನಾವು ಕಣಕ್ಕಿಳಿಯಬೇಕು. ನಾವು ಮಾಡುವ ಕೆಲಸ ಬೇರೆಯವರಿಗೆ ಕಾಣಬಾರದು. ಬರೀ ಫ್ಲೆಕ್ಸ್‌ ಬ್ಯಾನರ್‌ ಹಾಕಿದರೆ ಪಕ್ಷ ಉಳಿಯುವುದಿಲ್ಲ. ಒಂದೊಂದು ಮತವನ್ನೂ ಪಕ್ಷಕ್ಕೆ ಸೇರಿಸುತ್ತಾ ಹೋದಾಗ ಮಾತ್ರ ಗೆಲುವು ಸಿಗಲು ಸಾಧ್ಯ. ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಾಗಿದೆ. ಈಗ ನಾವು ಪಕ್ಷಕ್ಕೆ ಕೊಡಬೇಕಾದ್ದೇನು ಎಂಬುದು ಬಹಳ ಮುಖ್ಯ ಎಂದರು.