ಇಸ್ಲಾಮಾಬಾದ್‌[ಜೂ.11]: ನಕಲಿ ಬ್ಯಾಂಕ್‌ ಖಾತೆಗಳನ್ನು ತೆರೆದು, ಅವುಗಳ ಮೂಲಕ ವಿದೇಶಕ್ಕೆ ಅಕ್ರಮವಾಗಿ ಹಣ ವರ್ಗಾಯಿಸಿದ ಆರೋಪ ಸಂಬಂಧ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಹಣವನ್ನು ಕೂಡಿಡಲು, ಬಳಿಕ ಅದನ್ನು ವಿದೇಶಗಳಿಗೆ ವರ್ಗಾಯಿಸಲು ಆಸಿಫ್‌ ಅಲಿ ಜರ್ದಾರಿ ಹಾಗೂ ಅವರ ಸೋದರಿ ಫರ್ಯಾಲ್‌ ತಾಲ್‌ಪುರ ಅವರು ಖೊಟ್ಟಿಖಾತೆಗಳನ್ನು ತೆರೆದಿದ್ದರು. ಈ ಖಾತೆಗಳ ಮೂಲಕ 15 ಕೋಟಿ ರು. ಹಣವನ್ನು ವರ್ಗಾಯಿಸಿದ್ದರು. ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ಜರ್ದಾರಿ, ಫರ್ಯಾಲ್‌ ವಿರುದ್ಧ ಭಾನುವಾರ ವಾರಂಟ್‌ ಹೊರಡಿಸಿತ್ತು. ಜಾಮೀನು ಕೋರಿ ಈ ಇಬ್ಬರೂ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಇಸ್ಲಾಮಾಬಾದ್‌ ಕೋರ್ಟ್‌ ವಜಾಗೊಳಿಸಿತು.

ಬೆನ್ನಲ್ಲೇ ಅಧಿಕಾರಿಗಳು ಜರ್ದಾರಿ ಅವರನ್ನು ಬಂಧಿಸಿದರು. ಅವರ ಸೋದರಿಯ ಬಂಧನವಾಗಿಲ್ಲ. ಜರ್ದಾರಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್‌ ಭುಟ್ಟೋ ಅವರ ಪತಿ.