ನವದೆಹಲಿ[ಸೆ.10]: ಭಾರತದ ವಿರುದ್ಧ ನಿರಂತರ ಬೆಂಕಿಯುಗುಳುತ್ತಿದ್ದ ಪಾಕಿಸ್ತಾನದ ವಿರುದ್ಧ ಸದ್ಯ ಅಲ್ಲಿನ ನಾಗರಿಕರೇ ಧ್ವನಿ ಎತ್ತಲಾರಂಭಿಸಿದ್ದಾರೆ. ಪಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷ PTI ಶಾಸಕರಾಗಿದ್ದ ಬಲ್ ದೇವ್ ಕುಮಾರ್ ಸಿಂಗ್ ಸದ್ಯ ಪಾಕಿಸ್ತಾನಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ಬಂದಿದ್ದಾರೆ. ಪಂಜಾಬ್ ಗೆ ಮರಳಿರುವ ಸಿಂಗ್ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ.

'ಇಮ್ರಾನ್ ಖಾನ್ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ, ನಾನಲ್ಲಿ ಸುರಕ್ಷಿತನಾಗಿರಲಿಲ್ಲ. ಕೇವಲ ನನ್ನ ಮೇಲೆ ಮಾತ್ರವಲ್ಲ, ಅಲ್ಲಿರುವ ಎಲ್ಲಾ ಹಿಂದೂ ಹಾಗೂ ಸಿಖ್ಖರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲಿರುವ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ. ನನ್ನ ಮೇಲೆ ಶೋಷಣೆ ಹೆಚ್ಚಾದಾಗ ನಾನು ಮರಳಿ ಭಾರತಕ್ಕೆ ಬಂದೆ' ಎಂದು ತಮ್ಮ ನೋವನ್ನು ಬಹಿರಂಗಪಡಿಸಿದ್ದಾರೆ.

ಬಲದೇವ್ ಸಿಂಗ್ ಪಾಕಿಸ್ತಾನದ ಖೈಬರ್ ನ ಬಾರೀಕೋಟ್ ಮೀಸಲು ಕ್ಷೇತ್ರದ ಶಾಸಕರಾಗಿದ್ದರು. ಸದ್ಯ ಇವರು ಭಾರತದ ಪಂಜಾಬ್ ರಾಜ್ಯದ ಖನ್ನಾದಲ್ಲಿದ್ದಾರೆ. ಕುಮಾರ್ ತನ್ನ ಕುಟುಂಬದೊಂದಿಗೆ ಪ್ರಾಣ ರಕ್ಷಣೆಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ.

ಪಾಕಿಸ್ತಾನದ ಪರಿಸ್ಥಿತಿಯನ್ನು ವಿವರಿಸಿರುವ ಸಿಂಗ್ 'ಹಿಂದೂ ಹಾಗೂ ಸಿಖ್ಖರನ್ನು ಬಿಡ, ಇಮ್ರಾನ್ ಖಾನ್ ಮುಸ್ಲಿಂ ಸಮುದಾಯದವರಿಗೂ ಏನೂ ಮಾಡಿಲ್ಲ. ಮೊದಲು 500ರೂಪಾಯಿಗೆ ಸಿಗುತ್ತಿದ್ದ ವಸ್ತುಗಳ ಬೆಲೆ ಇಂದು 5000 ರೂಪಾಯಿಗೇರಿದೆ. ಈ ಹೊಸ ಪಾಕಿಸ್ತಾನ ಇಮ್ರಾನ್ ಖಾನ್ ಗೇ ಇರಲಿ. ಅಲ್ಲಿ ಏನೂ ಇಲ್ಲ' ಎಂದು ಪಕ್ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ಹಾಗೂ ಸಿಖ್ಖರ ಬಳಿ ಮನವಿ ಮಾಡಿಕೊಂಡಿರುವ ಬಲ್ ದೇವ್ ಸಿಂಗ್ ನಮ್ಮ ಜನರು ಹಾಗೂ ಸಮುದಾಯಕ್ಕಾಗಿ ಧ್ವನಿ ಎತ್ತಿ. ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮ ಜನರಿಗಾಗಿ ಕೆಲಸ ಮಾಡಿ' ಎಂದಿದ್ದಾರೆ.

ಸದ್ಯ ಭಾರತಕ್ಕೆ ಬಂದಿರುವ ಸಿಂಗ್ ಪ್ರಧಾನಿ ಮೋದಿಗೆ ಮನವಿ ಮಾಡುತ್ತಾ 'ಪಾಕಿಸ್ತಾನದಲ್ಲಿ ಬಹುತೇಕ ಎಲ್ಲರೂ ಅಸಮಾಧಾನದಿಂದಿದ್ದಾರೆ. ಇಮ್ರಾನ್ ಖಾನ್ ಕಳ್ಳರೊಂದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ಮೋದೀಜಿ ದಯವಿಟ್ಟು ನನಗೆ ಆಶ್ರಯ ನೀಡಿ. ಕೇವಲ ನಾನು ಮಾತ್ರವಲ್ಲ, ಪಾಕಿಸ್ತಾನದಲ್ಲಿರುವ ಎಲ್ಲಾ ಹಿಂದೂ ಹಾಗೂ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ' ಎಂದು ಬೇಡಿಕೊಂಡಿದ್ದಾರೆ.