ಬೆಂಗಳೂರು[ಸೆ.15]: ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಏರ್ಪಡಿಸಿದ್ದ ಒಕ್ಕಲಿಗರ ಪ್ರತಿಭಟನೆಯಿಂದ ಎಚ್‌.ಡಿ.ಕುಮಾರಸ್ವಾಮಿ ದೂರ ಉಳಿದಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿಸಲು ಡಿ.ಕೆ.ಶಿವಕುಮಾರ್‌ ಎಷ್ಟೆಲ್ಲಾ ಪರಿಶ್ರಮ ಪಟ್ಟಿದ್ದರು. ಈಗ ಒಕ್ಕಲಿಗ ಸಮುದಾಯ ಹಾಗೂ ಜನರಿಗೂ ಕುಮಾರಸ್ವಾಮಿ ಏನೆಂಬುದು ಗೊತ್ತಾಗಿದೆ ಎಂದು ಮಾಜಿ ಸಚಿವ ಎನ್‌. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಪರ ಹೋರಾಟಕ್ಕೆ ಒಕ್ಕಲಿಗ ಸಮುದಾಯದಿಂದ ನಮಗೂ ಸೇರಿ ಯಾರಿಗೂ ಆಹ್ವಾನ ಇರಲಿಲ್ಲ. ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವ ದೃಷ್ಟಿಯಿಂದ ನಾವೆಲ್ಲಾ ಹೋಗಿದ್ದೆವು. ಆದರೆ, ಕುಮಾರಸ್ವಾಮಿ ನನಗೆ ಆಹ್ವಾನವಿರಲಿಲ್ಲ ಎಂದಿದ್ದಾರೆ. ಕುಮಾರಸ್ವಾಮಿಯವರ ಸರ್ಕಾರ ಉಳಿಸಲು ಡಿ.ಕೆ. ಶಿವಕುಮಾರ್‌ ಎಷ್ಟೆಲ್ಲಾ ಪ್ರಯತ್ನ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಏನು ಮಾಡಿದರೂ ಸರಿ ಎಂಬ ಭಾವನೆ ಸಮುದಾಯದಲ್ಲಿತ್ತು. ಇದೀಗ ಒಕ್ಕಲಿಗ ಸಮುದಾಯ ಏನು ಮಾಡಲಿದೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

ಕೆಲ ವರ್ಷಗಳಿಂದ ಜೆಡಿಎಸ್‌ನಿಂದ ಹಲವು ನಾಯಕರು ಹೊರಬಂದಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿರುವ ಗೊಂದಲಗಳಿಂದಲೇ ನಾನು ಪಕ್ಷ ಬಿಟ್ಟೆ. ಇದೀಗ ಜಿ.ಟಿ. ದೇವೇಗೌಡ, ಗುಬ್ಬಿ ಶ್ರೀನಿವಾಸ್‌ ಸೇರಿದಂತೆ ಹಲವರು ಪಕ್ಷ ಬಿಡುತ್ತಾರೆ ಎಂಬ ಮಾತಿದೆ. ಅಲ್ಲಿನವರ ವರ್ತನೆಯಿಂದ ಪಕ್ಷ ಬಿಟ್ಟರೂ ಪಕ್ಷ ಬಿಟ್ಟವರದ್ದೇ ತಪ್ಪು ಎಂಬ ಭಾವನೆ ಇತ್ತು. ಹಳೆ ಮೈಸೂರು ಭಾಗದಲ್ಲಿ ಜನರು ಕುಮಾರಸ್ವಾಮಿ ಅವರಿಗೆ ಆ ಶಕ್ತಿ ಕೊಟ್ಟಿದ್ದರು. ಈಗ ಜನರಿಗೂ ಮನವರಿಕೆಯಾಗಿದೆ. ಈಗಲಾದರೂ ಆ ಭಾವನೆ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದರು.