ಬೆಂಗಳೂರು[ಜು.27]: ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಲಿರುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಯಾವ ನಾಯಕರೂ ಭಾಗವಹಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಆದೇಶಿಸಿದ್ದರೂ, ಶಿವಾಜಿನಗರ ಕಾಂಗ್ರೆಸ್‌ ಶಾಸಕ ರೋಷನ್‌ ಬೇಗ್‌ ಹಾಗೂ ಮಧುಗಿರಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಭಾಗವಹಿಸಿದ್ದರು.

ಕೆಪಿಸಿಸಿ ಅಧ್ಯಕ್ಷರು ಟ್ವೀಟ್‌ ಮೂಲಕ ಸೂಚನೆ ನೀಡಿದ್ದರೂ ಪಕ್ಷದಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ಆರ್‌. ರೋಷನ್‌ ಬೇಗ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲಾ ಬಿಜೆಪಿ ನಾಯಕರೊಂದಿಗೂ ಉಭಯ ಕುಶಲೋಪರಿ ವಿಚಾರಿಸಿ ಶುಭಾಶಯ ತಿಳಿಸಿದರು. ಅಲ್ಲದೆ, ಕ್ಯಾಮೆರಾಗಳ ಕಡೆಗೆ ತಿರುಗಿ ವಿಜಯದ ಸಂಕೇತದಂತೆ ಎರಡು ಬೆರಳುಗಳನ್ನು ತೋರಿದರು. ಇದರ ಬೆನ್ನಲ್ಲೇ ಡಾ.ಜಿ. ಪರಮೇಶ್ವರ್‌ ಸೇರಿದಂತೆ ಮೈತ್ರಿ ನಾಯಕರ ಮೇಲೆ ಗುಡುಗುತ್ತಿದ್ದ ಕೆ.ಎನ್‌.ರಾಜಣ್ಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದರೂ, ಇದರ ಆಧಾರದ ಮೇಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದೆ. ಯಾವುದೇ ಪಕ್ಷದ ಕಾರ್ಯಕ್ರಮವಲ್ಲ ಎಂಬ ಸಮಜಾಯಿಷಿಯನ್ನು ಬೇಗ್‌ ಅವರು ನೀಡಿದರು.

ಇನ್ನು ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಾದರೂ, ನಗರದ ಪ್ರಥಮ ಪ್ರಜೆಯಾಗಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆಗಳು ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.