ಬಾದಾಮಿ[ಸೆ.06]: ಕಾನೂನಿನ ಪ್ರಕಾರವೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಬಂಧನವಾಗಿದೆ ಎಂಬ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಯಾವಾಗ ಲಾಯರ್‌ ಕೆಲಸ ಮಾಡಿದ್ದಾರೆ? ನನಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಬಾದಾಮಿಯಲ್ಲಿ ಗುರುವಾರ ಸುದ್ದಿಗಾರರು ಸಚಿವ ಬೊಮ್ಮಾಯಿ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಗರಂ ಆದ ಅವರು, ಬೇಲ್‌ ಯಾವಾಗ ಕೊಡಬೇಕು, ಯಾವಾಗ ಕೊಡಬಾರದು ಎನ್ನುವುದು ಕಾನೂನಿನಲ್ಲಿದೆ. ಆದರೆ, 4 ದಿನಗಳ ವಿಚಾರಣೆಗೆ ಹೋಗಿ ಸಮನ್ಸ್‌ಗೆ ಗೌರವ ಕೊಟ್ಟು ಇ.ಡಿ. ಮುಂದೆ ಹಾಜರಾದರೂ ಡಿ.ಕೆ.ಶಿವಕುಮಾರ ಅವರಿಗೆ ಬೇಲ್‌ ಕೊಡಬಹುದಾಗಿತ್ತು. ಏಕೆ ಕೊಡಲಿಲ್ಲಾ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ED ಕುಣಿಕೆಯಲ್ಲಿ ಡಿಕೆಶಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿ ಬಂಧನ ಸೇಡಿನ ಕ್ರಮ:

ಸದ್ಯ ಡಿಕೆಶಿಯನ್ನು ಬಂಧಿಸಿರುವ ಇಡಿ ಕ್ರಮದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅರೆಸ್ಟ್‌ ಮಾಡುವುದೇ ಪರಿಹಾರವಲ್ಲ. ಅರೆಸ್ಟ್‌ ಯಾವಾಗ ಮಾಡಬೇಕೆಂದರೆ ಸಾಕ್ಷಿ ನಾಶ, ಸಾಕ್ಷಿ ಕೊಂಡುಕೊಳ್ಳುವಂತಹ ಸಂದರ್ಭದಲ್ಲಿ ಅರೆಸ್ಟ್‌ ಅನಿವಾರ್ಯ. ಆದರೆ, ನಾಲ್ಕು ದಿನಗಳ ಕಾಲ ವಿಚಾರಣೆಗೆ ಹಾಜರಾಗಿ ಉತ್ತರ ಕೊಟ್ಟಾಗಲೂ ಬಂಧಿಸಿರುವುದು ರಾಜಕೀಯ ಪ್ರಚೋದಿತ ಹಾಗೂ ಸೇಡಿನಿಂದ ಮಾಡಿರುವ ಕ್ರಮ. ನಾನೊಬ್ಬ ನ್ಯಾಯವಾದಿಯಾಗಿದ್ದವ, ಅದಕ್ಕೇ ಇದನ್ನೆಲ್ಲ ಹೇಳುತ್ತಿದ್ದೇನೆ ಎಂದರು.

ಅದನ್ನೇಕೆ ತನಿಖೆ ಮಾಡಲಿಲ್ಲ?:

ನಾವು ಕಾನೂನಿನ ವಿರುದ್ಧವಲ್ಲ. ಆದರೆ ಶಾಸಕ ಶ್ರೀನಿವಾಸ ಗೌಡ ಅಧಿವೇಶನದಲ್ಲಿ ಬಿಜೆಪಿಯ ಅಶ್ವತ್‌ ನಾರಾಯಣ ನನಗೆ ಐದು ಕೋಟಿ ಹಣ ತಂದು ಕೊಟ್ಟರು ಎಂದು ಹೇಳಿದರು. ಅದನ್ನೇಕೆ ತನಿಖೆ ಮಾಡುತ್ತಿಲ್ಲ. ಆ ಸಂದರ್ಭದಲ್ಲಿ ಆಡಿಯೋ ಕೂಡ ಇತ್ತು. ಆದರೂ ತನಿಖೆ ಮಾಡಲಿಲ್ಲ ಎಂದರು.

ಅಬಕಾರಿ ಸಚಿವ ನಾಗೇಶ ಹೇಳಿದ ಮನೆ ಮನೆಗೆ ಮದ್ಯ ಸರಬರಾಜು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಮೂರ್ಖತನದ ವಿಚಾರ (ಇಟ್‌ ಈಸ್‌ ಎ ಫäಲಿಶ್‌ ಥಿಂಕಿಂಗ್‌) ಎಂದು ಹೇಳಿದರು.