ನಾಟಿ ಕೋಳಿ, ಮಟನ್‌ ಸಾರಿಂದ ಈಗ ಸಿದ್ದರಾಮಯ್ಯ ದೂರ!

Former CM Siddaramaiah away from non-veg
Highlights

ವಿಧಾನಸಭಾ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು, 69ನೇ ವಯಸ್ಸಿನಲ್ಲೂ ರಾಜ್ಯಾದ್ಯಂತ ಸುತ್ತಾಡಿ ಅಬ್ಬರದ ಪ್ರಚಾರ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಕೆಲವು ದಿನಗಳ ಮಟ್ಟಿಗೆ ಎಲ್ಲ ಜಂಜಾಟಗಳಿಂದ ದೂರವಿದ್ದಾರೆ. ತಿಂಗಳುಗಟ್ಟಲೆ ದೇಹ, ಮನಸ್ಸನ್ನು ದುಡಿಸಿಕೊಂಡಿದ್ದ ಅವರು ದಣಿವಾರಿಸಿಕೊಳ್ಳಲು ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಅಲ್ಲೀಗ ಮುದ್ದೆ, ನಾಟಿ ಕೋಳಿಯಿಲ್ಲ, ಮಟನ್‌ ಸಾರು ಇಲ್ಲ, ನೆಂಜಿಕೊಳ್ಳಲು ಉಪ್ಪಿನಕಾಯಿಯೂ ಇಲ್ಲ. ಉಪ್ಪು, ಹುಳಿ, ಖಾರ... ಉಹೂಂ ಯಾವುದೂ ಇಲ್ಲ. ಕೇವಲ ಸಾತ್ವಿಕ ಆಹಾರವನ್ನಷ್ಟೇ ಸೇವಿಸುತ್ತಿದ್ದಾರೆ, ಅದೂ ನಿಗದಿತ ಪ್ರಮಾಣದಲ್ಲಿ ಮಾತ್ರ!

ಮಂಗಳೂರು (ಜೂ. 20): ವಿಧಾನಸಭಾ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು, 69ನೇ ವಯಸ್ಸಿನಲ್ಲೂ ರಾಜ್ಯಾದ್ಯಂತ ಸುತ್ತಾಡಿ ಅಬ್ಬರದ ಪ್ರಚಾರ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಕೆಲವು ದಿನಗಳ ಮಟ್ಟಿಗೆ ಎಲ್ಲ ಜಂಜಾಟಗಳಿಂದ ದೂರವಿದ್ದಾರೆ.

ತಿಂಗಳುಗಟ್ಟಲೆ ದೇಹ, ಮನಸ್ಸನ್ನು ದುಡಿಸಿಕೊಂಡಿದ್ದ ಅವರು ದಣಿವಾರಿಸಿಕೊಳ್ಳಲು ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಅಲ್ಲೀಗ ಮುದ್ದೆ, ನಾಟಿ ಕೋಳಿಯಿಲ್ಲ, ಮಟನ್‌ ಸಾರು ಇಲ್ಲ, ನೆಂಜಿಕೊಳ್ಳಲು ಉಪ್ಪಿನಕಾಯಿಯೂ ಇಲ್ಲ. ಉಪ್ಪು, ಹುಳಿ, ಖಾರ... ಉಹೂಂ ಯಾವುದೂ ಇಲ್ಲ. ಕೇವಲ ಸಾತ್ವಿಕ ಆಹಾರವನ್ನಷ್ಟೇ ಸೇವಿಸುತ್ತಿದ್ದಾರೆ, ಅದೂ ನಿಗದಿತ ಪ್ರಮಾಣದಲ್ಲಿ ಮಾತ್ರ!

ಹೌದು. ಸಿದ್ದರಾಮಯ್ಯ ಅವರು ಈಗ ಪಥ್ಯಾಹಾರ ಸೇವಿಸುತ್ತಿದ್ದಾರೆ. ಕಾಲಕಾಲಕ್ಕೆ ಚಾಚೂ ತಪ್ಪದೆ ಯೋಗ, ಪ್ರಾಣಾಯಾಮವನ್ನೂ ಮಾಡುತ್ತಿದ್ದಾರೆ. ಧರ್ಮಸ್ಥಳ ಸಮೀಪದ ಶಾಂತಿವನದಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ 12 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ದಾಖಲಾಗಿರುವ ಅವರು ಈಗ ಎರಡು ದಿನಗಳನ್ನಷ್ಟೆಪೂರೈಸಿದ್ದಾರೆ. ಸುತ್ತಲೂ ಸದಾ ಗಿಜಿಗುಡುತ್ತಿದ್ದ ಬೆಂಬಲಿಗರಿಂದ, ಕುಟುಂಬದಿಂದ ದೂರವಿದ್ದು ದೇಹ- ಮನಸ್ಸನ್ನು ಮತ್ತೆ ರಾಜಕೀಯ ಚದುರಂಗದಾಟಕ್ಕೆ ಸಜ್ಜುಗೊಳಿಸಲು ‘ಹುರಿ’ಗೊಳಿಸುತ್ತಿದ್ದಾರೆ.

ಹೀಗಿದೆ ಸಿದ್ದು ದಿನಚರಿ

ಬೆಳಗ್ಗೆ ಆರು ಗಂಟೆಯಿಂದ ಸಿದ್ದರಾಮಯ್ಯ ಅವರ ದಿನಚರಿ ಆರಂಭ. 7 ಗಂಟೆವರೆಗೆ ಯೋಗ, ಪ್ರಾಣಾಯಾಮ, ಧ್ಯಾನ ಮಾಡುತ್ತಾರೆ. 7.30ಕ್ಕೆ ಕುಂಬಳಕಾಯಿಯಿಂದ ತಯಾರಿಸಿದ ಜ್ಯೂಸ್‌ ಸೇವನೆ, 8ರಿಂದ 8.30ರವರೆಗೆ ಹೊಟ್ಟೆಮತ್ತು ತಲೆಗೆ ಮಡ್‌ಪ್ಯಾಕ್‌ ಚಿಕಿತ್ಸೆ, 9 ಗಂಟೆಗೆ ಸರಿಯಾಗಿ ನೀಡಲಾಗುವ ರಾಗಿ ಗಂಜಿಯೇ ಬೆಳಗ್ಗಿನ ತಿಂಡಿ. ನಂತರ ದೇಹಕ್ಕೆ ಜಲಚಿಕಿತ್ಸೆ, ಕೊಲೊನ್‌ ಹೈಡ್ರೋ ಥೆರಪಿ ಇತ್ಯಾದಿ ಚಿಕಿತ್ಸೆಗಳು, 11 ಗಂಟೆಗೇ ಮಧ್ಯಾಹ್ನ ಊಟ. ಊಟದಲ್ಲಿ ಅನ್ನವೇ ಇಲ್ಲ.

ಉಪ್ಪು- ಖಾರ ಇಲ್ಲದ ಹಸಿ ತರಕಾರಿ, ಸಲಾಡ್‌, ಹಣ್ಣುಗಳು, ಮೊಳಕೆ ಕಾಳು, ಮಜ್ಜಿಗೆ ಮಾತ್ರ. ಬಳಿಕ ಎರಡು ಗಂಟೆ ವಿಶ್ರಾಂತಿ ಪಡೆದರೆ ಮಧ್ಯಾಹ್ನ ಕಟಿಸ್ನಾನ, ಜಿಎಚ್‌ ಪ್ಯಾಕ್‌ನಂತಹ ಚಿಕಿತ್ಸೆಗಳಿಗೆ ದೇಹ ಒಡ್ಡಬೇಕು. ಸಂಜೆ 5ರಿಂದ 6ರವರೆಗೆ ಸಿದ್ದರಾಮಯ್ಯರಿಗೆ ರಿಲ್ಯಾಕ್ಸ್‌ ಮೂಡ್‌. ವಾಕಿಂಗ್‌ ಮಾಡುತ್ತಾರೆ. ಸಂಜೆ 6.30ಕ್ಕೇ ರಾತ್ರಿಯೂಟ ರೆಡಿ. ಎರಡು ಚಪಾತಿ, ಬೇಯಿಸಿದ ತರಕಾರಿಗಳು, ಪಪ್ಪಾಯಿ, ಮಜ್ಜಿಗೆ- ಇದರಲ್ಲೂ ಉಪ್ಪು ಖಾರವಿಲ್ಲ. ರಾತ್ರಿ 8 ಗಂಟೆಗೆ ಕಾಲಿಗೆ ನೀರು, ಚೆಸ್ಟ್‌ ಪ್ಯಾಕ್‌ ಚಿಕಿತ್ಸೆಗಳು ನಡೆದ ಬಳಿಕ ಗಡಿಯಾರದ ಗಂಟೆ 10 ಹೊಡೆದೊಡನೆ ಲೈಟ್‌ ಆಫ್‌! ಸುಖನಿದ್ರೆಯ ಸಮಯ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ.

ಮೂರು ಬಗೆಯ ಚಿಕಿತ್ಸೆ

ಸಿದ್ದರಾಮಯ್ಯ ಅವರಿಗೆ ಮೂರು ಬಗೆಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಮೂಲಕ ಮನಸ್ಸಿನ ಚಿಕಿತ್ಸೆ ನಡೆದರೆ, ಜಲ ಚಿಕಿತ್ಸೆ, ಮಸಾಜ್‌ ಇತ್ಯಾದಿ ವಿಧಾನಗಳ ಮೂಲಕ ದೇಹಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೇಹ ಶುದ್ಧವಾಗಲು ಉಪ್ಪು, ಖಾರ, ಎಣ್ಣೆ ಅಂಶವಿಲ್ಲದ ಡಯಟ್‌ ಚಿಕಿತ್ಸೆಯೂ ಸೇರಿದೆ. ಮೊದಲ ನಾಲ್ಕು ದಿನಗಳ ಕಾಲ ಡಯಟ್‌ ಮೇಲೆ ಚಿಕಿತ್ಸೆ ಕೇಂದ್ರೀಕರಿಸಿದರೆ, ನಂತರದ ನಾಲ್ಕು ದಿನ ದೇಹವನ್ನು ‘ಕಾಮ್‌ ಡೌನ್‌’ಗೊಳಿಸಲಾಗುವುದು. ಕೊನೆಯ ನಾಲ್ಕು ದಿನ ದೇಹವನ್ನು ಮತ್ತೆ ಮರು ಸಜ್ಜುಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ, ಚಿಕಿತ್ಸಾಲಯದ ಮುಖ್ಯ ಆರೋಗ್ಯಾಧಿಕಾರಿ ಡಾ. ಪ್ರಶಾಂತ್‌ ಶೆಟ್ಟಿ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಶಿಸ್ತಿನ ಸಿಪಾಯಿ: ಚಿಕಿತ್ಸೆಗಾಗಿ ದೇಹವನ್ನು ದಂಡಿಸಿಕೊಳ್ಳುತ್ತಿದ್ದರೂ ಸಿದ್ದರಾಮಯ್ಯ ಚಾಚೂ ತಪ್ಪದೆ ವೈದ್ಯರ ಸೂಚನೆಗಳನ್ನು ಶಿಸ್ತಿನ ಸಿಪಾಯಿಯಂತೆ ಪಾಲಿಸುತ್ತಿದ್ದಾರಂತೆ. ‘ಆರು ಗಂಟೆಗೆ ನಿದ್ದೆಯಿಂದ ಏಳಲು ಹೇಳಿದರೆ ಸಿದ್ದರಾಮಯ್ಯ ಮುಂಜಾನೆ ಐದೂವರೆ ಹೊತ್ತಿಗೇ ಎದ್ದು ರೆಡಿಯಾಗುತ್ತಾರೆ. ಈ ಹಿಂದೆಯೂ ಅವರು ಮೂರು ಸಾರಿ ಇಲ್ಲಿಗೆ ಬಂದಿದ್ದಾಗಲೂ ಎಲ್ಲ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿದ್ದರು’ ಎಂದು ವೈದ್ಯರು ನೆನಪಿಸಿಕೊಳ್ಳುತ್ತಾರೆ.
 

loader