ವಿಜಯವಾಡ(ಸೆ.11): ಆಂಧ್ರದ ದ್ವೇಷ ರಾಜಕಾರಣ ಮತ್ತೊಂದು ಮಜಲು ತಲುಪಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಗೃಹ ಬಂಧನಕ್ಕೆ ಗುರಿಪಡಿಸಲಾಗಿದೆ. 

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದ್ದು,  ಸರ್ಕಾರದ ವಿರುದ್ದ ಆಯೋಜಿಸಲಾಗಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಚಂದ್ರಬಾಬು ನಾಯ್ಡು ಹಾಗೂ ಪುತ್ರ ನಾರಾ ಲೋಕೇಶ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

ಚಂದ್ರಬಾಬು ನಾಯ್ಡು ಅವರನ್ನು ಅವರ ಮನೆಯಲ್ಲಿ ವಶಕ್ಕೆ ಪಡೆದಿರುವ ಪೊಲೀಸರು,  ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಾರೆ. ಈ ವೇಳೆ ಟಿಡಿಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ಕೀಡ ನಡೆದಿದೆ.

ಇದೇ ವೇಳೆ ತೆಲುಗು ದೇಶಂ ಪಕ್ಷದ ಹಲವು ಹಿರಿಯ ನಾಯಕರನ್ನೂ ಗೃಹ ಬಂಧನದಲ್ಲಿರಿಸಲಾಗಿದ್ದು, ಆಂಧ್ರದಲ್ಲಿ ತೀವ್ರ ರಾಜಕೀಯ ಉದ್ವಿಗ್ನ ಪರಿಸ್ಥಿತಿ ಉದ್ಭವವಾಗಿದೆ. 

ಆಡಳಿತಾರೂಢ ಸರ್ಕಾರ ಮಾನವ ಹಕ್ಕು ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಈ ರೀತಿಯ ಕೀಳು ರಾಜಕಾರಣದಿಂದ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಚಂದ್ರಬಾಬು ನಾಯ್ಡು ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.