ಮಾಯಾ ಟ್ವೀಟ್‌ ನೋಡದೆ ಎಡವಟ್ಟಾಯ್ತು: ಮಹೇಶ್‌| ಮುಂಚೆ ತಟಸ್ಥವಿರಲು ಹೇಳಿದ್ದರು ನಂತರ ವಿಶ್ವಾಸಮತಕ್ಕೆ ಹೋಗುವಂತೆ ಟ್ವೀಟ್‌ ಮಾಡಿದ್ದರು| ನಾನು ಧ್ಯಾನ ಕೇಂದ್ರಕ್ಕೆ ಹೋಗಿದ್ದೆ, ಹೀಗಾಗಿ ಟ್ವೀಟ್‌ ನೋಡಲಿಲ್ಲ: ಉಚ್ಚಾಟಿತ ಬಿಎಸ್‌ಪಿ ಶಾಸಕ| ಬಿಜೆಪಿ ಜೊತೆ ಕೈಜೋಡಿಸಿಲ್ಲ, ಬಿಎಸ್‌ಪಿ ಮುಖಂಡರ ಜೊತೆ ಚರ್ಚಿಸಿ ಎಲ್ಲ ಸರಿಪಡಿಸಿಕೊಳ್ಳುವೆ

ಬೆಂಗಳೂರು[ಜು.25]: ಪಕ್ಷದ ವರಿಷ್ಠರು ಮೊದಲು ತಟಸ್ಥ ಧೋರಣೆ ಅನುಸರಿಸುವಂತೆ ಸೂಚಿಸಿದ್ದರು. ಆದರೆ, ಆನಂತರ ವಿಶ್ವಾಸ ಮತಯಾಚನೆ ವೇಳೆ ಮೈತ್ರಿ ಸರ್ಕಾರದ ಪರವಾಗಿ ಮತಹಾಕುವಂತೆ ಟ್ವೀಟರ್‌ ಮೂಲಕ ಸೂಚಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕಾರಣ ಸದನಕ್ಕೆ ಗೈರಾಗುವ ಘಟನೆ ಜರುಗಿತು ಎಂದು ಬಿಎಸ್‌ಪಿ ಉಚ್ಚಾಟಿತ ಶಾಸಕ ಎನ್‌.ಮಹೇಶ್‌ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಾಸಮತ ಯಾಚನೆ ವೇಳೆ ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸುವಂತೆ ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೂಚಿಸಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ವಿಶ್ವಾಸ ಮತಯಾಚನೆ ಮಾಡುವ ವೇಳೆ ಸದನಕ್ಕೆ ಹಾಜರಾಗದ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಆದರೆ, ನಾನು ಧ್ಯಾನ ಕೇಂದ್ರದಲ್ಲಿದ್ದ ಕಾರಣ ನನ್ನ ಮೊಬೈಲ್‌ ಸ್ವಿಚ್‌್ಡ ಆಫ್‌ ಮಾಡಿದ್ದೆ. ಈ ಬಗ್ಗೆ ಸ್ಪಷ್ಟಮಾಹಿತಿ ಲಭಿಸದ್ದರಿಂದ ಹೀಗಾಯಿತು ಎಂದು ತಿಳಿಸಿದರು.

ಪಕ್ಷದ ಆದೇಶವನ್ನು ಉಲ್ಲಂಘನೆ ಮಾಡಿಲ್ಲ ಮತ್ತು ಅಶಿಸ್ತಿನಿಂದ ನಡೆದುಕೊಂಡಿಲ್ಲ. ನನ್ನನ್ನು ಉಚ್ಚಾಟನೆ ಮಾಡಿರುವುದು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ ಎಂಬುದು ನಾನ್‌ಸೆನ್ಸ್‌. ನನಗೂ ಖಾಸಗಿ ಜೀವನ ಇರುತ್ತದೆ. ಇದರಿಂದಾಗಿ ಮಾಹಿತಿ ಕೊರತೆಯಾಗಿದೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಲಿದ್ದು, ಎಲ್ಲವೂ ಸರಿಹೋಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಗ್ಗೆ ಮಾಯಾವತಿ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದು. ಮುಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ತಟಸ್ಥನಾಗಿರುತ್ತೇನೆ. ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಕೆಲವರು ಬಿಜೆಪಿಯಿಂದ ಹಣ ಪಡೆದು ಕಲಾಪದಿಂದ ಹೊರಗುಳಿದಿದ್ದಾರೆ ಎಂಬ ಆರೋಪಗಳನ್ನು ಮಾಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರುವಾದುದು. ಸಂವಹನದ ಕೊರತೆಯಿಂದಾಗಿ ಸದನಕ್ಕೆ ಹಾಜರಾಗಿರಲಿಲ್ಲ ವಿನಃ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯ ಇಲ್ಲ ಎಂದು ಖಡಕ್ಕಾಗಿ ಹೇಳಿದರು.

ರಾಜ್ಯಾದ್ಯಂತ ಜೆಡಿಎಸ್‌-ಬಿಎಸ್‌ಪಿ ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಿದ್ದೆವು. ಪಕ್ಷವು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿ ನಾಲ್ಕು ತಿಂಗಳ ಕಾಲ ಆಡಳಿತ ನಡೆಸಿದ್ದೇನೆ. ರಾಜಕೀಯ ಬೆಳವಣಿಗೆಯಿಂದಾಗಿ ಪಕ್ಷದ ವರಿಷ್ಠರಾದ ಮಾಯಾವತಿ ಅವರು ರಾಜೀನಾಮೆ ನೀಡುವಂತೆ ಹೇಳಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಕಳೆದ ಜೂ.23ರಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿಯೂ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ವರಿಷ್ಠರಲ್ಲಿ ಕೇಳಿದಾಗ ಸ್ವತಂತ್ರವಾಗಿ ಇರುವಂತೆ ಸೂಚನೆ ನೀಡಿದ್ದರು. ಅವರ ಸೂಚನೆಯಂತೆ ತಟಸ್ಥನಾಗಿದ್ದೆ. ಅಲ್ಲದೇ, ಆ ಕಾರಣಕ್ಕಾಗಿಯೇ ವಿಧಾನಸಭೆಯಲ್ಲಿ ಪ್ರತ್ಯೇಕ ಸ್ಥಾನ ಮೀಸಲಿಡುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದೆ ಎಂದು ವಿವರಿಸಿದರು.

ವಿಶ್ವಾಸಮತ ಯಾಚನೆ ವೇಳೆ ಏನು ಮಾಡಬೇಕು ಎಂಬುದರ ಬಗ್ಗೆಯೂ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ ಅವರಲ್ಲಿ ಕೇಳಿದ್ದೆ. ಮಾಯಾವತಿ ಅವರನ್ನು ಕೇಳಿದ ಅವರು ತಟಸ್ಥನಾಗಿರುವಂತೆ ನನಗೆ ಮಾಹಿತಿ ನೀಡಿದ್ದರು. ಹೀಗಾಗಿ ತಟಸ್ಥವಾಗಿರಲು ನಿರ್ಧರಿಸಿದೆ.

- ಎನ್‌.ಮಹೇಶ್‌, ಶಾಸಕ

ವಿಶ್ವಾಸಮತ ಯಾಚನೆ ವೇಳೆ ಏನು ಮಾಡಬೇಕು ಎಂಬುದರ ಬಗ್ಗೆಯೂ ರಾಜ್ಯ ಉಸ್ತುವಾರಿ ಅಶೋಕ್‌ ಸಿದ್ಧಾರ್ಥ ಅವರಲ್ಲಿ ಕೇಳಿದ್ದೆ. ಮಾಯಾವತಿ ಅವರನ್ನು ಕೇಳಿದ ಅವರು ತಟಸ್ಥನಾಗಿರುವಂತೆ ನನಗೆ ಮಾಹಿತಿ ನೀಡಿದ್ದರು. ಹೀಗಾಗಿ ತಟಸ್ಥವಾಗಿರಲು ನಿರ್ಧರಿಸಿದೆ. ಅಲ್ಲದೇ, ಜು.15ರವರೆಗೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಮರುದಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ಅಲ್ಲಿ ಇದ್ದೆ. ತರುವಾಯ ಧಾನ್ಯ ಕೇಂದ್ರಕ್ಕೆ ತೆರಳಿದ್ದರಿಂದ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿತ್ತು. ಮೈತ್ರಿಗೆ ಬೆಂಬಲ ಸೂಚಿಸುವಂತೆ ಮಾಯಾವತಿ ಅವರು ಸೂಚಿಸಿರಲಿಲ್ಲ. ನಂತರ ಟ್ವಿಟ್‌ ಮಾಡಿ ಮೈತ್ರಿಗೆ ಬೆಂಬಲಿಸುವಂತೆ ಹೇಳಿರುವುದು ಗಮನಕ್ಕೆ ಬಂದಿಲ್ಲ. ನಾನು ಟ್ವಿಟರ್‌ ನೋಡುವುದಿಲ್ಲ. ಮಾಯಾವತಿ ಅವರ ಆದೇಶ ತಿಳಿಯದ ಕಾರಣ ಸದನಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು