ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವುದು, ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದು ಬ್ರ್ಯಾಂಡ್ ಆಗಿ (ಮೋದಿ ಬ್ರ್ಯಾಂಡ್ ಮಾದರಿಯಲ್ಲಿ) ರೂಪಿಸಲು ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದ ಎರಡು ಬೃಹತ್ ಮಾರ್ಕೆಟಿಂಗ್, ಕಮ್ಯೂನಿಕೇಷನ್ ಹಾಗೂ ಬ್ರ್ಯಾಂಡಿಂಗ್ ಸಂಸ್ಥೆಗಳ ಸೇವೆಯನ್ನು ಪಡೆದಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹತ್ತಾರು ಜನಪ್ರಿಯ ಯೋಜನೆ ನೀಡಿದೆ. ಆದರೆ, ಅದಕ್ಕೆ ಸಿಗಬೇಕಾದಷ್ಟು ಪ್ರಚಾರ ಸಿಗುತ್ತಿಲ್ಲ ಎಂಬುದು ಕಾಂಗ್ರೆಸ್ ವಲಯದಲ್ಲಿದ್ದ ದೊಡ್ಡ ಕೊರಗು. ಸರ್ಕಾರದ ಯೋಜನೆಗಳನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಯನ್ನು ಜನರಿಗೆ ತಲುಪಿಸಿ ಸರ್ಕಾರ ಹಾಗೂ ಸಿಎಂ ಪರ ವಾತಾವರಣ ರೂಪಿಸುವಲ್ಲಿ ಪಕ್ಷ ವಿಫಲವಾಗಿದೆ ಎಂಬುದು ಹಳೆಯ ದೂರು. ಇಂತಹ ದೂರು ದೂರ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಇಂಟರ್’ನ್ಯಾಷನಲ್ ಲೆವಲ್‌ಗೆ ಹೋಗಿದೆ.
ಹೌದು, ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವುದು, ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದು ಬ್ರ್ಯಾಂಡ್ ಆಗಿ (ಮೋದಿ ಬ್ರ್ಯಾಂಡ್ ಮಾದರಿಯಲ್ಲಿ) ರೂಪಿಸಲು ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದ ಎರಡು ಬೃಹತ್ ಮಾರ್ಕೆಟಿಂಗ್, ಕಮ್ಯೂನಿಕೇಷನ್ ಹಾಗೂ ಬ್ರ್ಯಾಂಡಿಂಗ್ ಸಂಸ್ಥೆಗಳ ಸೇವೆಯನ್ನು ಪಡೆದಿದೆ.
ಅವು- ಜಾಗತಿಕ ಮಟ್ಟದ ಅತಿದೊಡ್ಡ ಮಾರ್ಕೆಟಿಂಗ್ ಹಾಗೂ ಕಮ್ಯೂನಿಕೇಷನ್ ಸಂಸ್ಥೆ ಎನಿಸಿದ ನ್ಯೂಯಾರ್ಕ್ ಮೂಲದ ಹಾಗೂ ಶತಮಾನದಷ್ಟು (1896ರಲ್ಲಿ ಸ್ಥಾಪಿತವಾದ) ಹಳೆಯ ಕಂಪನಿಯಾದ ಜೆ. ವಾಲ್ಟರ್ ಥಾಮ್ಸನ್ (ಜೆಡಬ್ಲ್ಯುಟಿ). ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರಾದ ಗುಜರಾತ್ ಮೂಲದ ಅಡೋಸ್’ಫಿಯರ್.
ಈ ಎರಡು ಕಂಪನಿಗಳು ಈಗಾಗಲೇ ಕರುನಾಡಿನಲ್ಲಿ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿವೆ. ಜೆಡಬ್ಲ್ಯುಟಿ ಮುಖ್ಯವಾಗಿ ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತು, ಸಾಕ್ಷ್ಯಚಿತ್ರ ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿನೂತನವಾಗಿ ರೂಪಿಸುವ ಸೃಜನಶೀಲ ಕಾರ್ಯವನ್ನು ನೋಡಿಕೊಳ್ಳುತ್ತದೆ.
ಇನ್ನು ಆಡೋಸ್’ಫಿಯರ್ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶಿಸಲು ಅನುವಾಗುವ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಈ ಎರಡು ಸಂಸ್ಥೆಗಳಿಗೆ ಸೇರಿದ ನೂರಕ್ಕೂ ಹೆಚ್ಚು ಮಂದಿ ವೃತ್ತಿಪರರು ಈಗಾಗಲೇ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ತಮ್ಮ ಕಾರ್ಯಾಚರಣೆ ಆರಂಭಿಸಿದ್ದಾರೆ. ಅದಕ್ಕಾಗಿಯೇ ಮೀಡಿಯಾ ಕಂಟ್ರೋಲ್ ರೂಂ ಸಹ ಆರಂಭಗೊಂಡಿದೆ.
ಸಾಮಾಜಿಕ ಜಾಲತಾಣ: ಅಡೋಸ್ಫಿಯರ್ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೇಸ್‌ಬುಕ್ ಅಕೌಂಟ್, ಟ್ವೀಟರ್ ಅಕೌಂಟ್‌ಗಳು ಹಾಗೂ ಸಿಎಂ ಸಿದ್ದರಾಮಯ್ಯ ಆ್ಯಪ್ ಅನ್ನು ನಿರ್ವಹಿಸುತ್ತದೆ. ಯಾವುದೇ ರಾಷ್ಟ್ರೀಯ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಬೆಳವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತ್ವರಿತವಾಗಿ ಪ್ರತಿಕ್ರಿಯೆ ನೀಡುವಂತೆ ಮಾಡುವುದು, ಇಂತಹ ಪ್ರತಿಕ್ರಿಯೆ ನೀಡುವಾಗ ಯಾವ ರೀತಿಯ ‘ಭಾಷೆ ಬಳಸಬೇಕು ಎಂಬುದನ್ನು ಈ ಸಂಸ್ಥೆ ನೋಡಿಕೊಳ್ಳುತ್ತದೆ. ಈ ಎರಡು ಸಂಸ್ಥೆಗಳ ವೃತ್ತಿಪರರು ಈಗಾಗಲೇ ನಗರದಲ್ಲಿ ಬೀಡುಬಿಟ್ಟಿದ್ದು, ಮೀಡಿಯಾ ಕಂಟ್ರೋಲ್ ರೂಂ ಮೂಲಕ ತಮ್ಮ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ.
ನ್ಯೂಯಾರ್ಕ್ ಕಂಪನಿ ಕೆಲಸವೇನು?
ಇಡೀ ಕಾರ್ಯಾಚರಣೆಯ ಬಾಸ್ ಎಂದರೆ ಜೆಡಬ್ಲ್ಯುಟಿ. ಈ ಸಂಸ್ಥೆಯು ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಚಾರದ ಹೊಣೆಯನ್ನು ಹೊತ್ತಿದೆ. ಇತ್ತೀಚೆಗೆ ಸುದ್ದಿವಾಹಿನಿಗಳು, ಪತ್ರಿಕೆಗಳು ಸೇರಿದಂತೆ ಸರ್ಕಾರದಿಂದ ಹೊರಬೀಳುತ್ತಿರುವ ಪ್ರಚಾರಕ್ಕೆ ಸಂಬಂಧಿಸಿದ ಪ್ರತಿಯೊಂದು (ಜಾಹೀರಾತು ವಿನ್ಯಾಸ, ಸಾಕ್ಷ್ಯಚಿತ್ರಗಳು, ರೇಡಿಯೋ ಜಿಂಗಲ್ ಸೇರಿದಂತೆ) ಪ್ರಚಾರ ಸಾಮಗ್ರಿ ಯನ್ನು ಸೃಜನಶೀಲವಾಗಿ ರೂಪಿಸಿ ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಇದರ ಕೆಲಸ. ಈ ಸಂಸ್ಥೆ ರೂಪಿಸುವ ಪ್ರತಿಯೊಂದು ಪ್ರಚಾರ ಸಾಮಗ್ರಿಯನ್ನು ಪರಿಶೀಲಿಸಿ ಅದನ್ನು
ಅಂತಿಮಗೊಳಿಸುವ ಕಾರ್ಯವನ್ನು ಸಿಎಂ ಕಚೇರಿ ಹಾಗೂ ಡಿಐಪಿಆರ್‌ನ ಉನ್ನತ ಅಧಿಕಾರಿಗಳು ಮಾಡುತ್ತಾರೆ. ರಸ್ತೆಗಳಲ್ಲಿ ಕಾಣುವ ವಿನೂತನ ಜಾಹೀರಾತುಗಳು, ವಿನೂತನ ಪ್ರಚಾರ ತಂತ್ರಗಳು ಎಲ್ಲವೂ ಈ ಪ್ರಯತ್ನದ ಒಂದು ಭಾಗ.
