ನಗರದ ಬಡ ಜನರಿಗಾಗಿ ಆರಂಭಿಸಲಾಗಿರುವ ಮೊದಲ ಹಂತದ ಎಲ್ಲಾ 101 ಇಂದಿರಾ ಕ್ಯಾಂಟೀನ್‌'ಗಳಲ್ಲಿ ಪ್ರಸ್ತುತ ವಿತರಿಸಲಾಗುತ್ತಿರುವ ತಿಂಡಿ, ಊಟದ ಸಂಖ್ಯೆಯನ್ನು ಬೇಡಿಕೆ ಗನುಸಾರ ಹೆಚ್ಚಳ ಮಾಡಿ ಬಿಬಿಎಂಪಿ ಆದೇಶ ಮಾಡಿದೆ.

ಬೆಂಗಳೂರು(ಅ.01): ನಗರದ ಬಡ ಜನರಿಗಾಗಿ ಆರಂಭಿಸಲಾಗಿರುವ ಮೊದಲ ಹಂತದ ಎಲ್ಲಾ 101 ಇಂದಿರಾ ಕ್ಯಾಂಟೀನ್‌'ಗಳಲ್ಲಿ ಪ್ರಸ್ತುತ ವಿತರಿಸಲಾಗುತ್ತಿರುವ ತಿಂಡಿ, ಊಟದ ಸಂಖ್ಯೆಯನ್ನು ಬೇಡಿಕೆ ಗನುಸಾರ ಹೆಚ್ಚಳ ಮಾಡಿ ಬಿಬಿಎಂಪಿ ಆದೇಶ ಮಾಡಿದೆ.

ಅಕ್ಟೋಬರ್ 1ರಿಂದ ಈ ಆದೇಶ ಜಾರಿಗೆ ಬರಲಿದೆ. ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ ಈ ವರೆಗೆ ಪ್ರತೀ ಕ್ಯಾಂಟೀನ್‌'ನಲ್ಲಿ ಒಂದು ಹೊತ್ತಿಗೆ 300 ಪ್ಲೇಟ್‌ಗಳಿಗೆ ಸೀಮಿತವಿದ್ದ ತಿಂಡಿ ಮತ್ತು ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ಬೇಡಿಕೆಗನುಗುಣವಾಗಿ 400ರಿಂದ 600 ಪ್ಲೇಟ್‌'ವರೆಗೆ ಏರಿಕೆ ಮಾಡಲಾಗಿದೆ. ಬಹುತೇಕ ಕ್ಯಾಂಟೀನ್‌'ಗಳಲ್ಲಿ ತಿಂಡಿ ಮತ್ತು ಮಧ್ಯಾಹ್ನದ ಊಟದ ಸಂಖ್ಯೆಯನ್ನು ಬೇಡಿಕೆಗೆ ತಕ್ಕಂತೆ 400, 450, 500 ಪ್ಲೇಟ್‌'ಗಳಿಗೆ ಹೆಚ್ಚಿಸಲಾಗಿದೆ.

ಜಯನಗರ (ಅಶೋಕ ಪಿಲ್ಲರ್) ಮತ್ತು ಸುಭಾಷ್‌'ನಗರ ವಾರ್ಡುಗಳ ಕ್ಯಾಂಟೀನ್'ಗಳಲ್ಲಿ ಹೆಚ್ಚು ಬೇಡಿಕೆ ಕಂಡುಬಂದಿದ್ದು, ಅವುಗಳಲ್ಲಿ ತಿಂಡಿ ಮತ್ತು ಮಧ್ಯಾಹ್ನದ ಊಟ ಸಂಖ್ಯೆಯನ್ನು ಪ್ರತಿ ಹೊತ್ತಿಗೆ 600 ಪ್ಲೇಟ್ ಗಳಿಗೆ ಹೆಚ್ಚಿಸಲಾಗಿದೆ.

ರಿವಾರ್ಡ್ಸ್ ರಾತ್ರಿ ಊಟಕ್ಕೆ ಬೇಡಿಕೆ ಹೆಚ್ಚು:

ಬಿಬಿಎಂಪಿ ಆದೇಶ ಗಮನಿಸಿದಾಗ ಇಂದಿರಾ ಕ್ಯಾಂಟೀನ್‌'ಗಳಿಗೆ ಊಟ ಸರಬರಾಜು ಮಾಡುತ್ತಿರುವ ಎರಡು ಕಂಪನಿಗಳ ಪೈಕಿ ರಿವಾರ್ಡ್ಸ್ ಕಂಪನಿ ಪೂರೈಸುವ 46 ಕ್ಯಾಂಟೀನ್'ಗಳ ಪೈಕಿ ಬಹುತೇಕ ಕ್ಯಾಂಟೀನ್‌ಗಳಲ್ಲಿ ರಾತ್ರಿ ಊಟದ ಸಂಖ್ಯೆ 400ಕ್ಕೆ ಏರಿಕೆಯಾಗಿದೆ. ಆದರೆ, ಚೆಪ್ಟಾಕ್ ಕಂಪನಿ ಆಹಾರ ಪೂರೈಸುವ 52 ಕ್ಯಾಂಟೀನ್‌ಗಳ ಪೈಕಿ ಬೆರಳೆಣಿಕೆಯಷ್ಟು ಕ್ಯಾಂಟೀನ್‌'ಗಳಲ್ಲಿ ಮಾತ್ರ ರಾತ್ರಿ ಊಟದ ಸಂಖ್ಯೆ 400ಕ್ಕೆ ಏರಿದೆ.

ಉಳಿದವುಗಳಲ್ಲಿ ಬೇಡಿಕೆ ಈ ಮೊದಲಿಗಿಂತ ಕುಸಿದಿದೆ. ಬಹಳಷ್ಟು ಕ್ಯಾಂಟೀನ್‌'ಗಳಲ್ಲಿ ಬೇಡಿಕೆ 200ಕ್ಕೆ ಇಳಿದಿದ್ದರೆ, ರಾಜರಾಜೇಶ್ವರಿನಗರ ವಾರ್ಡ್‌'ನಲ್ಲಿ ಅತೀ ಕಡಿಮೆ 100 ಪ್ಲೇಟ್‌'ಗೆ ಇಳಿಸಲಾಗಿದೆ.