Asianet Suvarna News Asianet Suvarna News

ಡ್ಯಾಂಗಳಿಗೆ 3 ಪಟ್ಟು ಹೆಚ್ಚು ನೀರು ಹರಿವು :ಸಂಕಷ್ಟದಲ್ಲಿ ಜನತೆ

ಭಾರೀ ಮಳೆಯಿಂದ ದಕ್ಷಿಣ ಕರ್ನಾಟಕದ ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣ ಮೂರೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಇನ್ನೂ ಮೂರ್ನಾಲ್ಕು ದಿನ ರಾಜ್ಯದಲ್ಲಿ ಇದೇ ರೀತಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪುವ ಸಾಧ್ಯತೆ ಇದೆ. 

Flood situation in Many Districts 3 Time More Water Flow in Dams
Author
Bengaluru, First Published Aug 8, 2019, 7:45 AM IST

ಲಿಂಗರಾಜು ಕೋರಾ

ಬೆಂಗಳೂರು ( ಆ.08) :  ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ ಈ ಮುಂಗಾರು ಅವಧಿಯಲ್ಲಿ ರಾಜ್ಯ ಎದುರಿಸುತ್ತಿದ್ದ ಮಳೆ ಕೊರತೆಯನ್ನು ಬಹುತೇಕ ನೀಗಿಸಿದೆ. ಅಲ್ಲದೆ, ವರ್ಷದ ಈವರೆಗಿನ ಒಟ್ಟಾರೆ ಮಳೆ ಕೊರತೆ ಪ್ರಮಾಣ ಕೂಡ ಅರ್ಧಕ್ಕರ್ಧ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಜಲಾಶಯಗಳಿಗೆ ನೀರಿನ ಒಳ ಹರಿವಿನ ಪ್ರಮಾಣ ಏಕ್‌ದಂ ಮೂರು ಪಟ್ಟು ಹೆಚ್ಚಿದೆ.

ಭಾರೀ ಮಳೆಯಿಂದ ದಕ್ಷಿಣ ಕರ್ನಾಟಕದ ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣ ಮೂರೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಇನ್ನೂ ಮೂರ್ನಾಲ್ಕು ದಿನ ರಾಜ್ಯದಲ್ಲಿ ಇದೇ ರೀತಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪುವ ಸಾಧ್ಯತೆ ಇದೆ. ಇನ್ನು, ಈಗಾಗಲೇ ಭರ್ತಿ ಹಂತದಲ್ಲಿರುವ ಉತ್ತರ ಕರ್ನಾಟಕ ಭಾಗದ ಜಲಾಶಯಗಳಿಗೂ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಲಕ್ಷಾಂತರ ಕ್ಯೂಸೆಕ್‌ ನೀರನ್ನು ಹೊರಬಿಡುತ್ತಿರುವುದರಿಂದ ಆ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟುಜಾಸ್ತಿಯಾಗಿ ಜನರು ಸಂಕಷ್ಟಅನುಭವಿಸುತ್ತಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮೂರು ದಿನಗಳಿಂದ ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಅದರಲ್ಲೂ ಆ.6 ಮತ್ತು 7ರಂದು ಬಹುತೇಕ ಇಡೀ ರಾಜ್ಯದಲ್ಲಿ ಮಳೆಯಾಗಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಮಳೆ ಇಲ್ಲದೆ ಕಂಗೆಟ್ಟಿದ್ದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದೆ. ಬಯಲುಸೀಮೆ ಜಿಲ್ಲೆಗಳಲ್ಲಿ ಮಾತ್ರ ಹಗುರದಿಂದ ಭಾರಿ ಮಳೆಯಾಗಿದೆ. ಆದರೆ, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದೆ. ಈ ಭಾಗಗಳಲ್ಲಿ ಕೇವಲ ಮೂರು ದಿನಗಳಲ್ಲಿ ವಾಡಿಕೆಗಿಂತ ನೂರಾರು ಪಟ್ಟು ಹೆಚ್ಚು ಮಳೆಯಾಗಿರುವುದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿರುವ ಅಂಕಿ ಅಂಶಗಳಲ್ಲಿ ಕಂಡು ಬರುತ್ತದೆ.

ಇದರಿಂದ ಈ ವರ್ಷದ ಮುಂಗಾರು ಅವಧಿಯಲ್ಲಿ ರಾಜ್ಯ ಎದುರಿಸುತ್ತಾ ಬಂದಿದ್ದ ಭಾರೀ ಮಳೆ ಕೊರತೆ ಕೇವಲ 72 ಗಂಟೆಗಳಲ್ಲಿ ಬಹುತೇಕ ನೀಗಿದೆ. ಮೂರು ದಿನಗಳ ಈ ಮಹಾಮಳೆಗೂ ಮುನ್ನ ಮುಂಗಾರು ಅವಧಿಯ ಮಳೆ ಕೊರತೆ ಶೇ.16ರಿಂದ ಶೇ.4ಕ್ಕೆ ಇಳಿದಿದ್ದರೆ, ವರ್ಷದ ಮಳೆಯ (ಜನವರಿಯಿಂದ ಈ ಕ್ಷಣದವರೆಗಿನ ಮಳೆ) ಕೊರತೆಯು ಶೇ.22ರಿಂದ ಶೇ.10ಕ್ಕೆ ಕುಸಿದಿದೆ.

3 ದಿನದಲ್ಲಿ ಜಲಾಶಯಗಳ ಒಳಹರಿವು 3 ಪಟ್ಟು ಹೆಚ್ಚಳ:

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ ಸೇರಿದಂತೆ ಈ ಭಾಗದ ಬಹುತೇಕ ಜಲಾಶಯಗಳ ಒಳಹರಿವು ಮೂರೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.

ಪ್ರಮುಖವಾಗಿ ಆ.4ರಂದು 32 ಸಾವಿರ ಕ್ಯೂಸೆಕ್‌ನಷ್ಟಿದ್ದ ಲಿಂಗನಮಕ್ಕಿ ಜಲಾಶಯದ ಒಳಹರಿವು ಆ.7ರಂದು 1.38 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಅದೇ ರೀತಿ ಈ ಅವಧಿಯಲ್ಲಿ ಸೂಪಾ ಜಲಾಶಯದ ಒಳ ಹರಿವು 32 ಸಾವಿರದಿಂದ 91 ಸಾವಿರ ಕ್ಯೂಸೆಕ್‌ಗೆ, ವಾರಾಹಿ ಒಳಹರಿವು 3 ಸಾವಿರ ದಿಂದ 14 ಸಾವಿರ ಕ್ಯೂಸೆಕ್‌ಗೆ, ಹಾರಂಗಿ 900ರಿಂದ 9 ಸಾವಿರ ಕ್ಯೂಸೆಕ್‌ಗೆ, ಹೇಮಾವತಿ 5 ಸಾವಿರ ದಿಂದ 28 ಸಾವಿರ ಕ್ಯೂಸೆಕ್‌ಗೆ, ಕೆಆರ್‌ಎಸ್‌ ಒಳಹರಿವು 5 ಸಾವಿರದಿಂದ 22 ಸಾವಿರ ಕ್ಯೂಸೆಕ್‌ಗೆ, ಕಬಿನಿ 2 ಸಾವಿರದಿಂದ 18 ಸಾವಿರ ಕ್ಯೂಸೆಕ್‌ಗೆ, ಭದ್ರಾ 4 ಸಾವಿರದಿಂದ 41 ಸಾವಿರ ಕ್ಯೂಸೆಕ್‌ಗೆ, ತುಂಗಭದ್ರಾ 20 ಸಾವಿರದಿಂದ 40 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಉತ್ತರದ ಜಲಾಶಯಗಳಿಗೆ ಲಕ್ಷಾಂತರ ಕ್ಯೂಸೆಕ್‌ ಒಳಹರಿವು:

ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಉಕ್ಕಿ ಹರಿಯುತ್ತಿದ್ದ ಉತ್ತರ ಕರ್ನಾಟಕದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಭೀಮಾ ನದಿಗಳು ರಾಜ್ಯದಲ್ಲೂ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಇದರಿಂದ ಆ.4ರಂದು 2.22 ಲಕ್ಷ ಕ್ಯೂಸೆಕ್‌ನಷ್ಟಿದ್ದ ಆಲಮಟ್ಟಿಜಲಾಶಯದ ಒಳಹರಿವುದು 3.62 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಅದೇ ರೀತಿ ನಾರಾಯಣಪುರ ಜಲಾಶಯದ ಒಳಹರಿವು 2.27 ಲಕ್ಷ ಕ್ಯೂಸೆಕ್‌ನಿಂದ 3.39 ಲಕ್ಷ ಕ್ಯೂಸೆಕ್‌ಗೆ, ಘಟಪ್ರಭಾ ಜಲಾಶಯದ ಒಳಹರಿವು 30 ಸಾವಿರ ಕ್ಯೂಸೆಕ್‌ನಿಂದ 93 ಸಾವಿರ ಕ್ಯೂಸೆಕ್‌ಗೆ, ಮಲಪ್ರಭಾ ಜಲಾಶಯದ ಒಳಹರಿವು 14 ಸಾವಿರದಿಂದ 71 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಈ ಜಲಾಶಯಗಳು ಬಹುತೇಕ ಭರ್ತಿ ಹಂತ ತಲುಪುತ್ತಿರುವುದರಿಂದ ಒಳಹರಿವಿನಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಳಗಾವಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳ ಅನೇಕ ಪ್ರದೇಶಗಳು ಮುಳುಗಡೆಯಾಗಿದ್ದು, ಜನರು ಕಂಗಾಲಾಗಿದ್ದಾರೆ.

3 ದಿನದಲ್ಲಿ ಆದ ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ)

ಆ.5    ಕರಾವಳಿ    ಮಲೆನಾಡು    ಉತ್ತರ ಒಳನಾಡು    ದಕ್ಷಿಣ ಒಳನಾಡು    ರಾಜ್ಯ

ವಾಡಿಕೆ    28.8    15.1    4.2    3.2    7.6

ಬಿದ್ದ ಮಳೆ    79    38    9    2 17.7

ಶೇ.(ಹೆಚ್ಚಳ)    174    153    107    -24    132.8

ಆ.6

ವಾಡಿಕೆ    27    16    4    3    7

ಬಿದ್ದ ಮಳೆ    157    84    18    7    38

ಶೇ.(ಹೆಚ್ಚಳ)    493    441    345    124    414

ಆ.7

ವಾಡಿಕೆ    26    15    4    3    7

ಬಿದ್ದ ಮಳೆ    119    100    14    14    36

ಶೇ.(ಹೆಚ್ಚಳ)    351    574    241    352    394

ಮಳೆ ಕೊರತೆ 3 ದಿನಗಳಲ್ಲಿ ಎಷ್ಟುಇಳಿಕೆ ಆಯ್ತು? (ಶೇಕಡಾವಾರು)

ಅವಧಿ    ಕರಾವಳಿ    ಮಲೆನಾಡು    ಉತ್ತರ ಒಳನಾಡು    ದಕ್ಷಿಣ ಒಳನಾಡು    ರಾಜ್ಯ

ಜೂ.1-ಆ.5(ಮುಂಗಾರು)    ಶೇ.10    ಶೇ.28    ಶೇ.11    ಶೇ.25    ಶೇ.14

ಜೂ.1-ಆ.7(ಮುಂಗಾರು)    ಶೇ.0    ಶೇ.13    ಶೇ.2    ಶೇ.16    ಶೇ.2

ಜ.1- ಆ.5(ವಾರ್ಷಿಕ)    ಶೇ.15    ಶೇ.31    ಶೇ.23    ಶೇ.20    ಶೇ.20

ಜ.1-ಆ.7(ವಾರ್ಷಿಕ)    ಶೇ.5    ಶೇ.18    ಶೇ.16    ಶೇ.15    ಶೇ.10

Follow Us:
Download App:
  • android
  • ios