ಬೆಳಗಾವಿ[ಆ.09]:  ಒಂದು ಕಡೆ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಇನ್ನೊಂದು ಕಡೆ ರಾಜ್ಯದ ಮಲೆನಾಡು ಸೇರಿದಂತೆ ಉಳಿದೆಡೆ ಮುಂದುವರಿದ ಭರ್ಜರಿ ಮಳೆಯಿಂದಾಗಿ ರಾಜ್ಯದ ಅರ್ಧಭಾಗವನ್ನು ಆವರಿಸಿರುವ ಪ್ರವಾಹ ಇನ್ನಷ್ಟುಪ್ರದೇಶಗಳಿಗೆ ವಿಸ್ತರಣೆಯಾಗುವ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರದಿಂದ ಮತ್ತೆ 5 ಲಕ್ಷ ಕ್ಯುಸೆಕ್‌ ನೀರು ಬಿಡುವ ಆತಂಕವಿದ್ದು, ಕೃಷ್ಣಾ ಮತ್ತು ಅದರ ಉಪನದಿಗಳ ತಟದ ಇನ್ನಷ್ಟುಹಳ್ಳಿಗಳಲ್ಲಿ ಮುಳುಗಡೆಯ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಮತ್ತೆ 300ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆಯಂತೆ ಈ ಗ್ರಾಮಗಳಿಂದ ಜನರನ್ನು ಸ್ಥಳಾಂತರಿಸುವ ಹಾಗೂ ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವವರ ಸ್ಥಳಾಂತರ ಕಾರ್ಯಕ್ಕೆ ವೇಗ ನೀಡಲಾಗಿದೆ. ಈ ಬಾರಿ ಇದೇ ಮೊದಲ ಬಾರಿಗೆ ಸೇನಾ ಹೆಲಿಕಾಪ್ಟರ್‌ ಬಳಸಿ 20ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ಏತನ್ಮಧ್ಯೆ ಮಳೆ, ಪ್ರವಾಹಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಗುರುವಾರ ಮತ್ತೆ ಏಳು ಮಂದಿ ಅಸುನೀಗಿದ್ದಾರೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 21 ಮಂದಿ ಬಲಿಯಾದಂತಾಗಿದೆ.

ಚುರುಕಾಯ್ತು ರಕ್ಷಣಾ ಕಾರ್ಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಖುದ್ದು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪರಿಹಾರ ಕಾರ್ಯಾಚರಣೆ ಚುರುಕುಗೊಂಡಿದೆ. ಕಬಲಾಪುರದಲ್ಲಿ 3 ದಿನಗಳಿಂದ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದಂಪತಿ ಸೇರಿ ಮತ್ತೆ ನೂರಾರು ಮಂದಿಯನ್ನು ರಕ್ಷಿಸಲಾಗಿದೆ. ನಿರಾಶ್ರಿತ ಕೇಂದ್ರಗಳಲ್ಲಿದ್ದ ಕುಂದು-ಕೊರತೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸೇನೆಯ 75 ತಂಡ ಸ್ಥಳದಲ್ಲೇ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯಕ್ಕೆ ನೆರವು ನೀಡುತ್ತಿದೆ.

ಇನ್ನು ಅಥಣಿಯಲ್ಲಿ ಮತ್ತೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬಿನ ಬೆಳೆ ನೀರುಪಾಲಾಗಿದ್ದು, ಮಹಾರಾಷ್ಟ್ರ ಸಂಪರ್ಕಿಸುವ ಜಾಂಬೋಟ ಸೇತುವೆ ಮುಳುಗಡೆಯಾಗಿದೆ. ಅಥಣಿಯ ಮುತ್ತೇಶ್ವರ ದೇವಸ್ಥಾನ ಹತ್ತಿ ಕೂತಿದ್ದ ಏಳು ಮಂದಿ ಹಾಗೂ ಉದಗಟ್ಟಿಗ್ರಾಮದಲ್ಲಿ ಸುಮಾರು 13 ಮಂದಿಯನ್ನು ಸೇನೆಯ ಕಾಪ್ಟರ್‌ ಬಳಸಿ ರಕ್ಷಿಸಲಾಗಿದೆ. ಇನ್ನು ಬುಧವಾರ ರಾತ್ರಿ ಧಾರವಾಡ ಜಿಲ್ಲೆಯಲ್ಲಿ ಸತತ ಐದು ಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದು, 1 ಸಾವಿಕ್ಕೂ ಹೆಚ್ಚು ಮನೆ ಜಲಾವೃತವಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದ ಅಪಾರ್ಟ್‌ಮೆಂಟ್‌ಗಳು ನಡುಗಡ್ಡೆಯಂತಾಗಿವೆ.

ಘಟ್ಟಭಾಗದಲ್ಲಿ ಮಳೆ: ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಳಿದೆಡೆ ಮಳೆ ತಗ್ಗಿದ್ದರೂ ಪ್ರವಾಹ ಇಳಿಮುಖವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಮಧ್ಯೆ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಲಡ್ಕೊರೆತವೂ ಹೆಚ್ಚಾಗುತ್ತಿದೆ. ನೇತ್ರಾವತಿ, ಕುಮಾರಧಾರಾ ನದಿ ತುಂಬಿ ಹರಿದು ಮಂಗಳೂರು-ಬೆಂಗಳೂರು ಹೆದ್ದಾರಿಯ ಉದನೆ ಬಳಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಗೂ ನೀರು ನುಗ್ಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಹಾಗೇ ಇದ್ದು, ಕಿನ್ನಾರ ಗ್ರಾಮದಲ್ಲಿ ಮತ್ತೆ 100ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ಮಲೆನಾಡು ಜಿಲ್ಲೆಗಳಲ್ಲಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಮತ್ತೆ ಭರ್ಜರಿ ಮಳೆಯಾಗಿದೆ. ಈ ಭಾಗದ ಕಾವೇರಿ, ಲಕ್ಷ್ಮಣತೀರ್ಥ, ತುಂಗಾ, ಭದ್ರಾ, ಶರಾವತಿ, ಹೇಮಾವತಿ ಸೇರಿ ಹಲವು ಪ್ರಮುಖ ನದಿಗಳಲ್ಲಿ ನೀರಿನ ಮಟ್ಟಮತ್ತಷ್ಟುಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್‌.ಆರ್‌.ಪುರದಲ್ಲಿ ಮಳೆಯಿಂದಾಗಿ ಅತಿ ಹೆಚ್ಚು ಹಾನಿಯಾಗಿದೆ. ಶೃಂಗೇರಿಯ ಶ್ರೀಮಠದ ಊಟದ ಹಾಲ್‌ನ ಕೆಳ ಅಂತಸ್ತಿನೊಳಗೂ ನೀರು ನುಗ್ಗಿದೆ. ಕೊಡಗಿನಲ್ಲಿ ಭಾಗಮಂಡಲ 3ನೇ ದಿನವೂ ಜಲಾವೃತ ಸ್ಥಿತಿಯಲ್ಲಿದೆ. ವಿರಾಜಪೇಟೆ-ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 275ರ ಕುಶಾಲನಗರ ಸೇತುವೆವರೆಗೆ ನದಿ ನೀರು ಹರಿಯುತ್ತಿದ್ದು, ಮಳೆ ಪ್ರಮಾಣ ಹೆಚ್ಚಾದರೆ ಕೊಡಗು-ಮೈಸೂರು ನಡುವಿನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಶಿವಮೊಗ್ಗ ನಗರದಲ್ಲಿ ಸತತ ನಾಲ್ಕನೇ ದಿನವೂ ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾಗರ-ಸಿದ್ದಾಪುರ ಸೇತುವೆ ಜಲಾವೃತ ಮುಳುಗಡೆಯಾಗಿದೆ. ಹಾಸನದಲ್ಲಿ ಮಲೆನಾಡಿಗೆ ಹೊಂದಿಕೊಂಡಿರುವ ತಾಲೂಕುಗಳಾದ ಸಕಲೇಶಪುರ, ಆಲೂರು, ಬೇಲೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಆರು ಮನೆಗಳು ಕುಸಿದಿವೆ.