ಬಾಡಿ ಬಿಲ್ಡರ್ ಮತ್ತು ಮಾಡೆಲ್ ಕೂಡ ಆಗಿರುವ ರೋಹನ್ ಗೌಡ ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಹೋಟೆಲ್'ನಲ್ಲಿರುವ "ದ ಶುಗರ್ ಫ್ಯಾಕ್ಟರಿ" ಎಂಬ ನೈಟ್ ಕ್ಲಬ್'ನ ಪಾರ್ಟ್ನರ್ ಕೂಡ ಆಗಿದ್ದಾರೆ.

ಬೆಂಗಳೂರು(ಡಿ. 15): ಯಶವಂತಪುರದಲ್ಲಿ ಮಂಗಳವಾರ ನಡೆದ ಐ-ಟಿ ರೇಡ್'ನಲ್ಲಿ ವಶಪಡಿಸಿಕೊಳ್ಳಲಾದ 2.87 ಕೋಟಿ ರೂಪಾಯಿ ಹಣವು ನಟ ಕಮ್ ಮಾಡೆಲ್ ರೋಹನ್ ಗೌಡ ಅವರಿಗೆ ಸೇರಿದ್ದೆಂಬುದು ಬೆಳಕಿಗೆ ಬಂದಿದೆ. ನಿನ್ನೆ ಐಟಿ ಅಧಿಕಾರಿಗಳು ಈ ಮನೆಯು ಮಂಜುನಾಥ ಗೌಡರಿಗೆ ಸೇರಿದ್ದೆಂದು ಮಾಹಿತಿ ನೀಡಿದ್ದರು. ಆದರೆ, ಶಕೀಲಾ ಶೆಟ್ಟಿ ಎಂಬುವವರ ಪುತ್ರ ಸಚಿನ್ ಶೆಟ್ಟಿ ಮಾಲಕತ್ವದ ಈ ಮನೆಯನ್ನು ಮಂಜುನಾಥ ಗೌಡ ಹೆಸರಿನಲ್ಲಿ ಬಾಡಿಗೆ ಪಡೆಯಲಾಗಿದೆ. ಆದರೆ, ರೋಹನ್ ಗೌಡ ಅವರು ಈ ಫ್ಲ್ಯಾಟ್'ನಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ.

ನಾಯಿ ಕಾವಲು ಇಟ್ಟಿದ್ದ:
ಯಶವಂತಪುರದ ಆರೆನ್ನೆಸ್ ಶಾಂತಿನಿವಾಸ್ ಅಪಾರ್ಟ್ಮೆಂಟ್'ನ ಫ್ಲ್ಯಾಟ್ ನಂಬರ್ 'ಎ508'ನಲ್ಲಿ ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಖಲೆ ಇಲ್ಲದ 2.87 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದ್ದರು. 2 ಸಾವಿರ ಮುಖಬೆಲೆಯ 2.25 ಕೋಟಿ ರೂ ಇದರಲ್ಲಿ ಒಳಗೊಂಡಿತ್ತು. ಆದರೆ, ದಾಳಿ ಮಾಡಲು ಹೋದಾಗ ಐ-ಟಿ ಅಧಿಕಾರಿಗಳಿಗೆ ಶಾಕ್ ಎದುರಾಗಿತ್ತು. ಹಣವಿದ್ದ ಕೊಠಡಿ ಬಳಿ ವೃದ್ಧೆಯೊಬ್ಬರು ಎರಡು ನಾಯಿಗಳನ್ನು ಕಾವಲಿಗೆ ಇಟ್ಟಿದ್ದರು. ಐಟಿ ಅಧಿಕಾರಿಗಳು ಬಂದಾಗ ಆ ನಾಯಿಯನ್ನು ಕಟ್ಟಿಹಾಕದೇ ಹಾಗೇ ಬಿಟ್ಟಿದ್ದರು. ಅಷ್ಟೇ ಅಲ್ಲ, ಅಧಿಕಾರಿಗಳ ಮೇಲೆ ನಾಯಿಯನ್ನು ಛೂ ಕೂಡ ಬಿಡಲಾಗಿತ್ತು. ಇದರಿಂದ ಅಧಿಕಾರಿಗಳು ಕೊಠಡಿ ತಪಾಸಣೆ ಮಾಡಲು ವಿಳಂಬವಾಗಿತ್ತು.

ಯಾರು ಈ ರೋಹನ್ ಗೌಡ?
ಕನ್ನಡ ಬಿಗ್ ಬಾಸ್'ನ ಮೊದಲ ಸೀಸನ್'ನಲ್ಲಿ ರೋಹನ್ ಗೌಡ ಸ್ಪರ್ಧಿಸುವ ಮೂಲಕ ರಾಜ್ಯದ ಜನರಿಗೆ ಹೆಚ್ಚು ಚಿರಪರಿಚಿತರಾಗಿದ್ದಾರೆ. ಅದರಲ್ಲಿ ಅವರು ಸಿಕ್ಸ್ ಪ್ಯಾಕ್ ಅವಾರ್ಡ್ ಕೂಡ ಗೆದ್ದಿದ್ದರು. ಬಿಗ್ ಬಾಸ್'ಗೆ ಮುನ್ನ ಇವರು ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ "ಪ್ಯಾಟೇಗ್ ಮಂದಿ ಕಾಡಿಗ್ ಬಂದ್ರು"ನ ವಿಜೇತರಾಗಿ ಗಮನ ಸೆಳೆದಿದ್ದರು.

ಬಾಡಿ ಬಿಲ್ಡರ್ ಮತ್ತು ಮಾಡೆಲ್ ಕೂಡ ಆಗಿರುವ ರೋಹನ್ ಗೌಡ ಅವರು ತನ್ನ ಮನೆಯಲ್ಲಿ ಇಷ್ಟು ಪ್ರಮಾಣದಲ್ಲಿ ಹಣ ಸಂಗ್ರಹಿಸಿದಿರುವುದರ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇರುವ ಶಂಕೆ ಇದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳು ಸದ್ಯ ರೋಹನ್ ಗೌಡ ಅವರ ವಿಚಾರಣೆ ನಡೆಸಿದ್ದಾರೆ.