ವಿವಾದಗಳ ಸರದಾರ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿದ ದಿನವೇ, ವಿಶ್ವದ ಪ್ರಭಾವಿ ರಾಷ್ಟ್ರವಾಗಿರುವ ಅಮೆರಿಕ ಸರ್ಕಾರವೇ ಬಂದ್ ಆಗಿಬಿಟ್ಟಿದೆ. ಸರ್ಕಾರದ ಅಲ್ಪಾವಧಿ ಖರ್ಚು- ವೆಚ್ಚಕ್ಕೆ ಸಂಬಂಧಿಸಿದ ಮಸೂದೆಯನ್ನು (ಲೇಖಾನುದಾನ) ಅಮೆರಿಕ ಸಂಸತ್ತಿನ ಮೇಲ್ಮನೆ ಸೆನೆಟ್ ತಿರಸ್ಕರಿಸಿದ್ದರಿಂದಾಗಿ ಈ ಬೆಳವಣಿಗೆ ನಡೆದಿದ್ದು, ಅನೇಕ ಸೇವೆಗಳು ಬಂದ್ ಆಗಿವೆ. ಪರಿಹಾರ ಸಿಗುವವವರೆಗೂ ಅಮೆರಿಕದ ಸುಮಾರು ೮.೫ ಲಕ್ಷ ಮಂದಿ ಸರ್ಕಾರ ನೌಕರರು ಸಂಬಳ ರಹಿತವಾಗಿ ಮನೆಯಲ್ಲೇ ಕೂರಬೇಕಾಗುತ್ತದೆ.
ವಾಷಿಂಗ್ಟನ್ (ಜ.21): ವಿವಾದಗಳ ಸರದಾರ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿದ ದಿನವೇ, ವಿಶ್ವದ ಪ್ರಭಾವಿ ರಾಷ್ಟ್ರವಾಗಿರುವ ಅಮೆರಿಕ ಸರ್ಕಾರವೇ ಬಂದ್ ಆಗಿಬಿಟ್ಟಿದೆ. ಸರ್ಕಾರದ ಅಲ್ಪಾವಧಿ ಖರ್ಚು- ವೆಚ್ಚಕ್ಕೆ ಸಂಬಂಧಿಸಿದ ಮಸೂದೆಯನ್ನು (ಲೇಖಾನುದಾನ) ಅಮೆರಿಕ ಸಂಸತ್ತಿನ ಮೇಲ್ಮನೆ ಸೆನೆಟ್ ತಿರಸ್ಕರಿಸಿದ್ದರಿಂದಾಗಿ ಈ ಬೆಳವಣಿಗೆ ನಡೆದಿದ್ದು, ಅನೇಕ ಸೇವೆಗಳು ಬಂದ್ ಆಗಿವೆ. ಪರಿಹಾರ ಸಿಗುವವವರೆಗೂ ಅಮೆರಿಕದ ಸುಮಾರು ೮.೫ ಲಕ್ಷ ಮಂದಿ ಸರ್ಕಾರ ನೌಕರರು ಸಂಬಳ ರಹಿತವಾಗಿ ಮನೆಯಲ್ಲೇ ಕೂರಬೇಕಾಗುತ್ತದೆ.
ಅಮೆರಿಕದಲ್ಲಿ ಈಗ ವಾರಾಂತ್ಯವಾಗಿರುವುದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. ಆದರೆ ಸೋಮವಾರದಿಂದ ಭಾರಿ ವ್ಯತ್ಯಯವಾಗಲಿದೆ. ಜನಸಾಮಾನ್ಯರು ಪರದಾಡಬೇಕಾಗುತ್ತದೆ. ಆದರೆ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸೇನೆ, ಅಗ್ನಿಶಾಮಕ ಸಿಬ್ಬಂದಿ ಎಂದಿನಂತೆಯೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ.
18 ನೇ ಸಲ ಬಂದ್: 1976 ರ ನಂತರ ಅಮೆರಿಕ ಸರ್ಕಾರ ಈ ರೀತಿ ಬಂದ್ ಆಗುತ್ತಿರುವುದು ಇದು 18 ನೇ ಬಾರಿ. ಐದು ವರ್ಷಗಳ ಹಿಂದೆ 2013 ರಲ್ಲಿ 16 ದಿನಗಳ ಕಾಲ ಆಡಳಿತ ಯಂತ್ರವೇ ಸ್ತಬ್ಧಗೊಂಡಿದ್ದರಿಂದ 8.5 ಲಕ್ಷ ಸರ್ಕಾರಿ ನೌಕರರಿಗೆ ವೇತನ ಸಿಕ್ಕಿರಲಿಲ್ಲ. 1996 ರ ಜ.6 ರಂದು ಒಟ್ಟು 21 ದಿನಗಳ ಕಾಲ ಅಮೆರಿಕ ಆಡಳಿತ ಸ್ಥಗಿತಗೊಂಡಿತ್ತು. ಆದರೆ ಅಮೆರಿಕ ಸಂಸತ್ತಿನ ಉಭಯ ಸದನಗಳಲ್ಲೂ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದ ಹೊರತಾಗಿಯೂ ಅಮೆರಿಕದ ಆಡಳಿತ ಯಂತ್ರ ಬಂದ್ ಆಗುತ್ತಿರುವುದು ಇದೇ ಮೊದಲು. ಆದಾಗ್ಯೂ 2013 ರಂತೆ ಹೆಚ್ಚು ದಿನ ಬಂದ್ ಆಗದಂತೆ ನೋಡಿಕೊಳ್ಳುವುದಾಗಿ ಟ್ರಂಪ್ ಅಧಿಕಾರಿಗಳು ಹೇಳುತ್ತಿದ್ದಾರೆ. ಫೆ.16 ರವರೆಗೆ ಅಗತ್ಯವಿರುವ ಖರ್ಚು-ವೆಚ್ಚಗಳಿಗೆ ಅನುಮೋದನೆ ಪಡೆಯಲು ಟ್ರಂಪ್ ಆಡಳಿತ ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಇದಕ್ಕೆ ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೀಟಿವ್ಸ್ ಒಪ್ಪಿಗೆ ಗುರುವಾರ ಸಿಕ್ಕಿತ್ತು. ಆದರೆ ಸಂಸತ್ತಿನ ಮೇಲ್ಮನೆಯಾಗಿರುವ ಸೆನೆಟ್‌ನಲ್ಲಿ ವಿಧೇಯಕಕ್ಕೆ ಸೋಲಾಯಿತು.
60 ಮತಗಳು ಬಂದಿದ್ದರೆ ಮಸೂದೆ ಅಂಗೀಕಾರವಾಗುತ್ತಿತ್ತು. ಆದರೆ ಪರವಾಗಿ 50 ಹಾಗೂ ವಿರುದ್ಧವಾಗಿ 48 ಮತಗಳು ಬಿದ್ದಿದ್ದರಿಂದ ತಿರಸ್ಕಾರವಾಯಿತು. ಗಡೀಪಾರು ಭೀತಿ ಎದುರಿಸುತ್ತಿರುವ ಅಕ್ರಮ ವಲಸಿಗರ ವಿಚಾರವಾಗಿ ಟ್ರಂಪ್ ಹಾಗೂ ಅವರ ಪಕ್ಷ ರಿಪಬ್ಲಿಕನ್ ಚರ್ಚೆಗೆ ಬರಲಿ ಎಂಬ ಡೆಮಾಕ್ರೆಟಿಕ್ ಪಕ್ಷದ ತಂತ್ರಗಾರಿಕೆಯ ಭಾಗ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ. ಅಮೆರಿಕ ಸರ್ಕಾರ ಬಂದ್ ಆಗುತ್ತಿದ್ದಂತೆ ಫ್ಲೋರಿಡಾ ಪ್ರವಾಸವನ್ನು ಟ್ರಂಪ್ ರದ್ದುಗೊಳಿಸಿದ್ದಾರೆ. ಏರುಗತಿಯಲ್ಲಿರುವ ಟ್ರಂಪ್ ಆರ್ಥಿಕತೆಯನ್ನು ಸ್ಥಗಿತಗೊಳಿಸಲು ಆಗದ ಕಾರಣ, ಡೆಮೊಕ್ರಟಿಕ್ ಪಕ್ಷದವರು ಹತಾಶರಾಗಿ ಅಮೆರಿಕ ಸರ್ಕಾರವನ್ನೇ ಸ್ಥಗಿತಗೊಳಿಸುತ್ತಿದ್ದಾರೆಯೇ? ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಮುಂದಿನ ವಾರದ ದಾವೋಸ್ ಪ್ರವಾಸವನ್ನು ಟ್ರಂಪ್ ರದ್ದು ಮಾಡಿಲ್ಲ.
