ಬೆಂಗಳೂರು :  ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ಮೆಂಬ​ರ್ಸ್ ರೀಕ್ರಿಯೇಷನ್ಸ್‌ ಲಾಂಚ್‌ ಕ್ಲಬ್‌ ಮೇಲೆ ದಾಳಿ ನಡೆಸಿ ತೊಂದರೆ ನೀಡಿದ ಆರೋಪದ ಮೇರೆಗೆ ಸಿಸಿಬಿ ಇಬ್ಬರು ಇನ್ಸ್‌ಪೆಕ್ಟರ್‌ಗಳು ಸೇರಿ ಮೂವರ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿಯ ವಿಶೇಷ ವಿಚಾರಣಾ ದಳದ ಇನ್ಸ್‌ಪೆಕ್ಟರ್‌ಗಳಾದ ಎಸ್‌.ರಮೇಶ್‌ ರಾವ್‌, ಪ್ರಕಾಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಅಶ್ವತ್ಥಯ್ಯ ಅವರಿಗೆ ಸಂಕಷ್ಟ ಎದುರಾಗಿದ್ದು, 2017ರ ಮಾಚ್‌ರ್‍ನಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಮೇಂಬ​ರ್ಸ್ ಕ್ಲಬ್‌ ಮೇಲೆ ಪೊಲೀಸರು ದಾಳಿ ನಡೆಸಿ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಸೋಮವಾರ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್‌ ಅವರು, ನ್ಯಾಯಾಲಯದ ಆದೇಶದ ಮೇರೆಗೆ ಸಿಸಿಬಿ ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಕ್ಲಬ್‌ ಮೇಲಿನ ದಾಳಿ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಹ ಸಲ್ಲಿಕೆಯಾಗಿದೆ. ಹೀಗಾಗಿ ಅದೊಂದು ಹಳೆಯ ಪ್ರಕರಣವಾಗಿರುವ ಕಾರಣ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ದಾಳಿ:  2017ರ ಮಾರ್ಚ್ 24ರಂದು ಮಧ್ಯಾಹ್ನ 1ರ ಸುಮಾರಿಗೆ ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿರುವ ‘ಮೆಂಬ​ರ್ಸ್ ರೀ ಕ್ರಿಯೇಷನ್ಸ್‌ ಲಾಂಚ್‌ ಕ್ಲಬ್‌’ ಮೇಲೆ ಸಿಸಿಬಿ ಇನ್ಸ್‌ಪೆಕ್ಟರ್‌ಗಳಾದ ರಮೇಶ್‌ ರಾವ್‌, ಪ್ರಕಾಶ್‌ ಹಾಗೂ ಬಸವೇಶ್ವರ ನಗರ ಠಾಣೆ ಪಿಎಸ್‌ಐ ಅಶ್ವತ್ಥಯ್ಯ ದಾಳಿ ನಡೆಸಿದ್ದರು. ಆಗ ಕಾನೂನುಬಾಹಿರವಾಗಿ ವಿಡಿಯೋ ಗೇಮ್‌ ಆಡುತ್ತಿದ್ದಾರೆಂದು ಆರೋಪಿಸಿ 13 ಮಂದಿಯನ್ನು ಬಂಧಿಸಿದ ಸಿಸಿಬಿ, ಬಳಿಕ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿತ್ತು.

ನಮ್ಮನ್ನು ಅಕ್ರಮವಾಗಿ ಬಂಧಿಸಿ ಪೊಲೀಸರು ಕಿರುಕುಳ ನೀಡಿದ್ದರು ಎಂದು ಆರೋಪಿಸಿ ನಗರದ 5ನೇ ಎಸಿಎಂಎಂ ನ್ಯಾಯಾಲಯಕ್ಕೆ ಅಂದು ದಾಳಿಗೊಳಗಾಗಿದ್ದ ವಸಂತನಗರದ ಜಿತೇಶ್‌ ಮನವಿ ಸಲ್ಲಿಸಿದ್ದರು. ಈ ಮನವಿ ಸ್ವೀಕರಿಸಿದ ನ್ಯಾಯಾಲಯವು, ಸಿಸಿಬಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿತು. ಈ ಹಿನ್ನೆಲೆಯಲ್ಲಿ ಅತಿಕ್ರಮ ಪ್ರವೇಶ (ಐಪಿಸಿ 441), ಸುಲಿಗೆ (ಐಪಿಸಿ 384) ಹಾಗೂ ಅಕ್ರಮ ಬಂಧನ (ಐಪಿಸಿ 341) ಆರೋಪಗಳಡಿ ಡಿ.14ರಂದು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.