ಹೆತ್ತವರನ್ನು ಕಳೆದುಕೊಂಡ ಬಳಿಕ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವುದು ಬಲು ಕಷ್ಟದ ಕೆಲಸವೇ ಸರಿ. ಆ ಸಂದರ್ಭದಲ್ಲಿ ಹೇಗೆ ಮುಂದುವರಿಯಬಹುದು ಎಂಬುವುದರ ಬಗ್ಗೆ ಇಲ್ಲಿದೆ ಕೈಪಿಡಿ
ಹೆತ್ತವರನ್ನು ಕಳೆದುಕೊಳ್ಳುವುದು, ಜೀವನದಲ್ಲಿ ಸಹಿಸಿಕೊಳ್ಳಲಾಗದಂತಹ ಬಹುದೊಡ್ಡ ಘಟನೆ. ಬಹಳ ದೀರ್ಘ ಸಮಯದವರೆಗೆ ಆ ನೋವು ಓರ್ವ ವ್ಯಕ್ತಿಯನ್ನು ಭಾವನಾತ್ಮಕವಾಗಿ ಪೀಡಿಸುತ್ತದೆ. ಹೆತ್ತವರ ನಿಧನದ ಬಳಿಕ ಹಲವು ಕಠಿಣ ಹಾಗೂ ಪ್ರಮುಖವಾದ ಕೆಲಸಗಳನ್ನು ಪೂರ್ತಿಗೊಳಿಸಬೇಕಾಗುತ್ತದೆ. ಅವರ ಹಣಕಾಸು ವ್ಯವಹಾರಗಳನ್ನು ಸರಿಯಾಗಿ ನಿಭಾಯಿಸುವುದು ಒಂದೆಡೆಯಾದರೆ, ಅವರಿಂದ ಬಳುವಳಿಯಾಗಿ ಬಂದಿರುವ ಸಂಪತ್ತನ್ನು ಕಾಪಾಡುವುದು ಕೂಡಾ ಮಹತ್ತರ ಜವಾಬ್ದಾರಿಯಾಗಿದೆ. ಅವರು ಪರಿಶ್ರಮಪಟ್ಟು ಸಂಪಾದಿಸಿದ ಸಂಪತ್ತು ವ್ಯರ್ಥವಾಗುವುದನ್ನು ಯಾರು ಕೂಡಾ ಬಯಸಲಾರರು.
ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು, ಹೂಡಿಕೆಗಳನ್ನು ಏನು ಮಾಡಬೆಕು? ವರ್ಗಾಯಿಸುವುದು ಹೇಗೆ? ಮಹತ್ವದ ಹಣಕಾಸು ದಾಖಲೆಗಳನ್ನು ಹೇಗೆ ನಿಭಾಯಿಸುವುದು ಎಂಬಿತ್ಯಾದಿ ಪ್ರಶ್ನೆಗಳು ಕಾಡಲು ಆರಂಭವಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ನಿಮಗಾಗಿ ಇಲ್ಲಿದೆ ಕೈಪಿಡಿ…
ಮರಣಪತ್ರ, ಉಯಿಲು, ಹಾಗೂ ಉತ್ತರಾಧಿಕಾರ ಪತ್ರ ಪಡೆಯುವುದು:
ಮೃತಪಟ್ಟ ವ್ಯಕ್ತಿಯ ಖಾತೆ ಮುಚ್ಚಲು, ಅಥವಾ ಸಂಪತ್ತಿನ ವರ್ಗಾಯಿಸುವಿಕೆ ಮುಂತಾದ ಎಲ್ಲಾ ಪ್ರಮುಖ ಹಣಕಾಸು ಸಂಬಂಧಿತ ವ್ಯವಹಾರಗಳಿಗೆ ಕಾನೂನಾತ್ಮಕ ದಾಖಲೆಯಾಗಿರುವ ಮರಣ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ. ಮರಣ ದೃಢೀಕರಣ ಪತ್ರದಲ್ಲಿ ನಮೂದಿಸಲಾಗಿರುವ ವಿವರಗಳು ಇತರ ದಾಖಲೆಗಳೊಂದಿಗೆ ತಾಳೆಯಾಗಬೇಕಾಗಿರುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದ ಪಕ್ಷದಲ್ಲಿ ನಿಮ್ಮ ಮನವಿ ತಿರಸ್ಕೃತಗೊಳ್ಳುವ ಸಾಧ್ಯತೆಗಳಿವೆ. ಮೃತಪಟ್ಟ್ವರ ಮರಣ ದೃಢೀಕರಣ ಪತ್ರವು ಬಹಳ ಪ್ರಮುಖ ದಾಖಲೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅದರ ಪ್ರತಿಗಳನ್ನು ಪಡೆದುಕೊಳ್ಳುವುದು ಸೂಕ್ತ.
ಆಸ್ತಿಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಉಯಿಲು ಪ್ರಮುಖವಾದ ದಾಖಲೆ. ಮೃತಪಟ್ಟವರು ತಮ್ಮ ಚರಾಸ್ತಿ ನೋಡಿಕೊಳ್ಳಳಲು ಯಾರನ್ನಾದರು ನಾಮಿನಿಯನ್ನಾಗಿ ನೇಮಿಸಿದ್ದರೂ, ಉಯಿಲು ಆ ಎಲ್ಲವನ್ನೂ ಅಸಿಂಧುಗೊಳಿಸುತ್ತದೆ.
ನಾಮಿನಿ ಮತ್ತು ಉಯಿಲು ಇಲ್ಲದಿರುವ ಸಂದರ್ಭದಲ್ಲಿ ಉತ್ತರಾಧಿಕಾರ ಪ್ರಮಾಣಪತ್ರಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ. ಉತ್ತರಾಧಿಕಾರ ಪ್ರಮಾಣಪತ್ರವು ಮೃತಪಟ್ಟವರ ಚರಾಸ್ತಿಯನ್ನು ವರ್ಗಾಯಿಸಕೊಳ್ಳಲು ಮಾತ್ರ ಬಳಸಿಕೊಳ್ಳಬಹುದಾಗಿದೆ.
ಎಲ್ಲಾ ಹಣಕಾಸು ದಾಖಲೆ ಹಾಗೂ ಪತ್ರಗಳನ್ನು ಸಂಗ್ರಹಿಸಿ:
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ಮಹತ್ವದ ವಿಷಯಗಳನ್ನು ನಿಮ್ಮ ಹೆತ್ತವರು ನಿಮಗೆ ತಿಳಿಸದೇ ಇರಬಹುದು. ಅಂತಹ ಸಂದರ್ಭದಲ್ಲಿ ಎಲ್ಲಾ ದಾಖಲೆಪತ್ರ, ಡೈರಿಗಳನ್ನು ಪರಿಶೀಲಿಸಿ, ಹೂಡಿಕೆ, ಸಾಲ ಮುಂತಾದ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ.
ಹೂಡಿಕೆ, ಸಾಲಗಾರರು ಹಾಗೂ ಬಾಧ್ಯತೆಗಳನ್ನು ಪಟ್ಟಿಮಾಡಿ:
ಪರಿಸ್ಥಿಯನ್ನು ಸಮರ್ಪಕವಾಗಿ ನಿರ್ವಹಿಸಲು ತೆಗೆದುಕೊಳ್ಳಲು, ಮೃತಪಟ್ಟವರ ಹೂಡಿಕೆ, ಸಾಲಗಾರರು ಹಾಗೂ ಇತರ ಬಾಧ್ಯತೆಗಳ ಬಗ್ಗೆ ನಿಖರವಾದ ವಿವರಗಳನ್ನು ಅರಿಯುವುದು ಅತೀ ಮುಖ್ಯ. ಏಕೆಂದರೆ ಅದು ನಿಮ್ಮ ಹಣಕಾಸು ಸ್ಥಿಗತಿಯ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ, ಸಾಲ ಮತ್ತು ಸಾಲಗಾರರ ವಾದ-ವಿವರಣೆಗಳನ್ನು ದೃಢೀಕರಿಸಲು ಕೂಡಾ ಅದು ಸಹಕಾರಿಯಾಗುತ್ತದೆ.
ಕಳೆದ 5 ವರ್ಷಗಳ ಬ್ಯಾಂಕ್ ಸ್ಟೇಟ್’ಮೆಂಟನ್ನು ಪರಿಶೀಲಿಸಿದರೆ ಆ ಬಗ್ಗೆ ಇನ್ನೂ ಸವಿವರವಾಗಿ ತಿಳಿದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್’ನಂತಹ ಹಣಕಾಸು ತಜ್ಞರನ್ನು ಸಂಪರ್ಕಿಸಿ ನೆರವನ್ನು ಪಡೆಯಬಹುದು.
ಮಾಹಿತಿ ತಲುಪಿಸಿ, ಖಾತೆಗಳನ್ನು ಮುಚ್ಚಿ, ವರ್ಗಾಯಿಸಿ:
ಮೃತಪಟ್ಟವರ ಹೆಸರಿನಲ್ಲಿರುವ ಬೇರೆ ಬೇರೆ ಖಾತೆಗಳಿದ್ದರೆ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ. ಅಗತ್ಯವಿದ್ದರೆ ಖಾತೆಗಳನ್ನು ಮುಚ್ಚಿ ಅಥವಾ ವರ್ಗಾಯಿಸಿಕೊಳ್ಳಿ. ಆ ಮೂಲಕ ವಂಚಕರು ಅದನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಬಹುದು. ಯಾವ್ಯಾವ ಖಾತೆಗಳನ್ನು ಮುಚ್ಚಬೇಕು ಎಂಬುವುದರ ವಿವರ ಲ್ಲಿದೆ….
ಬ್ಯಾಂಕ್ ಖಾತೆ, ಲಾಕರ್, ಸಾಲ ಮತ್ತು ಕ್ರೆಡಿಟ್ ಕಾರ್ಡ್:
ವ್ಯಕ್ತಿಯು ಮೃತಪಟ್ಟ ಬಳಿಕ ಆತ/ಕೆಯ ಬ್ಯಾಂಕ್ ಖಾತೆಯನ್ನು ಮುಚ್ಚಬೇಕು. ಮರಣಪತ್ರ/ಉಯಿಲು/ ನಾಮ ನಿರ್ದೇಶನ ಹಾಗೂ ಇನ್ನಿತರ ಅಗತ್ಯವಿರುವ ದಾಖಲೆಗಳೊಂದಿಗೆ ಸಂಬಂಧಪಟ್ಟವರಿಗೆ ಅರ್ಜಿಸ ಸಲ್ಲಿಸಿ ಖಾತೆಯನ್ನು ಮುಚ್ಚಬಹುದು ಹಾಗೂ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳಬಹುದು. ಅದೇ ರೀತಿ ಲಾಕರ್’ನಲ್ಲಿರುವ ವಸ್ತುಗಳನ್ನು ಪಡೆದುಕೊಂಡು ಲಾಕರನ್ನು ಮುಚ್ಚಿಸಬೇಕು.
ದುರ್ಬಳಕೆಯನ್ನು ತಡೆಯಲು ಕ್ರೆಡಿಟ್ ಕಾರ್ಡನ್ನು ತಕ್ಷಣ ಸ್ಥಗಿತಗೊಳಿಸುವುದು ಅತ್ಯವಶ್ಯ. ಮೃತಪಟ್ಟವರು ಸಾಲ ಪಡೆದಿದ್ದರೆ, ಸಂಬಂಧಪಟ್ಟ ಸಂಸ್ಥೆಯನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ. ಸಾಲವನ್ನು ಮರುಪಾವತಿಸಿ; ಸಂಪೂರ್ಣ ಸಾಲ ಸಂದಾಯವಾದ ಬಳಿಕ ಅಸಲಿ ದಾಖಲೆಗಳನ್ನು ಹಿಂಪಡೆಯಲು ಹಾಗೂ ‘ನೋ ಡ್ಯೂ’ ಪ್ರಮಾಣಪತ್ರನ್ನು ಪಡೆಯಲು ಮರೆಯದಿರಿ.
ಸ್ಥಿರಾಸ್ತಿ:
ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಕಾರು, ಮೋಟಾರ್ ಬೈಕು ಮುಂತಾದ ಸ್ಥಿರಾಸ್ತಿಗಳನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಿ. ವಾಹನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಇದು ಸಹಕಾರಿಯಾಗುತ್ತದೆ.
ಮೃತಪಟ್ಟವರು ಮ್ಯೂಚುವಲ್ ಫಂಡ್ಸ್, ಫಿಕ್ಸೆಡ್ ಡಿಪಾಸಿಟ್, ಶೇರು ಹಾಗೂ ಅಂಚೆ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿದ್ದರೆ ಆ ಬಗ್ಗೆ ತಕ್ಷಣ ಅಪ್ಡೇಟ್ ಮಾಡಬೇಕು. ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಬೇಕಾದರೆ ಮರಣ ದೃಡೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಪಟ್ಟ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
ಹಣಕಾಸು ವ್ಯವಹಾರಗಳು ಅಲ್ಲದೇ ಮೃತಪಟ್ಟವರ ಹೆಸರಿನಲ್ಲಿರುವ ನೀರು, ವಿದ್ಯುತ್ ಇತ್ಯಾದಿ ಮುನ್ಸಿಪಾಲಿಟಿ ಸೇವೆಗಳು, ನೋಂದಣಿ ಇತ್ಯಾದಿಗಳನ್ನು ಕೂಡಾ ಅಪ್’ಡೇಟ್ ಮಾಡಬೇಕು. ಎಲ್ಲಾ ಮೇಲ್ ವಿಳಾಸ ಮತ್ತು ಸೋಶಿಯಲ್ ಮೀಡಿಯಾ ಖಾತೆಗಳನ್ನು ಮುಚ್ಚಬೇಕು. ತೆರಿಗೆ ಸಂಬಂಧಿಸಿದ ಇಲಾಖೆಗಳಲಲ್ಲೂ ಮಾಹಿತಿಯನ್ನು ಅಪ್’ಡೇಟ್ ಮಾಡಬೇಕು. ಅಂತಿಮ ಆದಾಯ ತೆರಿಗೆಯನ್ನು ಫೈಲ್ ಮಾಡಿ, ಪ್ಯಾನ್ ಕಾರ್ಡ್’ನ್ನು ಸ್ಥಗಿತಗೊಳಿಸಬೇಕು.

ಆಧಿಲ್ ಶೆಟ್ಟಿ,
ಸಿಇಓ -ಬ್ಯಾಂಕ್ ಬಝಾರ್
[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]
