ಬೆಂಗಳೂರು [ಜು.11] :  ಉಸಿರು ನಿಂತು ಹೋದರೆ ಜೀವ ಹೋಗುವುದಿಲ್ಲವೇ? ಹಾಗೆಯೇ ಹಣಕಾಸು ಮಸೂದೆ ಅಧಿವೇಶನದಲ್ಲಿ ಅಂಗೀಕಾರವಾಗದಿದ್ದರೆ ಸರ್ಕಾರ ಪತನವಾಗಲಿದೆ ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಮಾರ್ಮಿಕವಾಗಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಅಧಿವೇಶನದಲ್ಲಿ ಹಣಕಾಸು ಮಸೂದೆಗೆ ಅಂಗೀಕಾರ ದೊರೆಯಬೇಕು. ಒಂದು ವೇಳೆ ಅಂಗೀಕಾರವಾಗದಿದ್ದರೆ ಸರ್ಕಾರ ಪತನವಾಗಲಿದೆ ಎಂದರು.

ನಾನು ಯಾರ ರಾಜೀನಾಮೆಯನ್ನೂ ತಿರಸ್ಕರಿಸಿಲ್ಲ. ಶಾಸಕರು ನೀಡಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕಾಗಿ ಕೆಲವರಿಗೆ ಮತ್ತೊಮ್ಮೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಂ.ಟಿ.ಬಿ.ನಾಗರಾಜ್‌, ಡಾ.ಸುಧಾಕರ್‌ ಅವರ ರಾಜೀನಾಮೆ ಪತ್ರಗಳ ಬಗ್ಗೆ ಜು.17ರಂದು ಪರಿಶೀಲನೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ಬಿಜೆಪಿ ಶಾಸಕರ ನಿಯೋಗ ಭೇಟಿ ಮಾಡಿ ಶಾಸಕರ ರಾಜೀನಾಮೆ ಪತ್ರಗಳನ್ನು ತಕ್ಷಣ ಅಂಗೀಕರಿಸುವಂತೆ ಮನವಿ ಮಾಡಿದೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಆ ನಿಯೋಗಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ರಮೇಶ್‌ ಕುಮಾರ್‌ ಹೇಳಿದರು.

ತಕ್ಷಣ ಅಂಗೀಕಾರಕ್ಕೆ ಬಿಜೆಪಿ ಮನವಿ:

ಇದಕ್ಕೂ ಮುನ್ನ ಸ್ಪೀಕರ್‌ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ, ಹಣಕಾಸು ಮಸೂದೆ ಅಧಿವೇಶನದಲ್ಲಿ ಅಂಗೀಕಾರವಾಗದಿದ್ದರೆ ತುಂಬಾ ಕಷ್ಟವಾಗಲಿದೆ. ಇದಕ್ಕಾಗಿಯೇ ಅಧಿವೇಶನ ಆರಂಭವಾಗುವ ಮೊದಲೇ ಶಾಸಕರ ರಾಜೀನಾಮೆ ಅಂಗೀಕರಿಸಿ ಮುಂದಿನ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ. ಮೈತ್ರಿ ಸರ್ಕಾರದ ಬಜೆಟ್‌ ಸಹ ಅಂಗೀಕಾರವಾಗಿಲ್ಲ. ಇದನ್ನೂ ಮಾಡಬೇಕಿದೆ ಎಂದು ತಿಳಿಸಿದರು.

ಅತೃಪ್ತರು ಸುಪ್ರೀಂ ಕೊರ್ಟ್‌ಗೆ ಹೋಗಿರುವುದಕ್ಕೂ, ಸಭಾಧ್ಯಕ್ಷರು ರಾಜೀನಾಮೆ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳುವುದಕ್ಕೂ ಸಂಬಂಧ ಇಲ್ಲ. ಅವರು ಶೀಘ್ರ ಕ್ರಮ ಕೈಗೊಳ್ಳಬಹುದು. ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಸಭಾಧ್ಯಕ್ಷರು ಆದಷ್ಟುಬೇಗ ನಿರ್ಧಾರ ಕೈಗೊಳ್ಳಬೇಕು. ರಾಜ್ಯದ ಹಿತದೃಷ್ಟಿಯಿಂದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಪ್ರತಿಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡದೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.