Asianet Suvarna News Asianet Suvarna News

ಪ್ರಮುಖ ಖಾತೆಗಾಗಿ ಜೆಡಿಎಸ್‌ನಲ್ಲಿ ಜಗ್ಗಾಟ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವ ಖಾತೆಗಳು ಹಂಚಿಕೆಯಾದ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಒಂದೆಡೆ ಪ್ರಮುಖ ಖಾತೆಗಳಿಗೆ ಹಗ್ಗ-ಜಗ್ಗಾಟ ಶುರುವಾಗಿದೆ. ಮತ್ತೊಂದೆಡೆ ನಿಗಮ-ಮಂಡಳಿಗಳಿಗೆ ಲಾಬಿ ಪ್ರಾರಂಭವಾಗಿರುವುದು ಪಕ್ಷದ ವರಿಷ್ಠರಿಗೆ ತಲೆ ಬಿಸಿ ತಂದಿದೆ.

Fight for post in JDS

ಬೆಂಗಳೂರು (ಜೂ. 03): ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ 12 ಸಚಿವ ಖಾತೆಗಳು ಹಂಚಿಕೆಯಾದ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಒಂದೆಡೆ ಪ್ರಮುಖ ಖಾತೆಗಳಿಗೆ ಹಗ್ಗ-ಜಗ್ಗಾಟ ಶುರುವಾಗಿದೆ. ಮತ್ತೊಂದೆಡೆ ನಿಗಮ-ಮಂಡಳಿಗಳಿಗೆ ಲಾಬಿ ಪ್ರಾರಂಭವಾಗಿರುವುದು ಪಕ್ಷದ ವರಿಷ್ಠರಿಗೆ ತಲೆ ಬಿಸಿ ತಂದಿದೆ.

ಜೆಡಿಎಸ್‌ಗೆ ಲಭ್ಯವಾಗಿರುವ ಖಾತೆಗಳ ಪೈಕಿ ಇಂಧನ, ಲೋಕೋಪಯೋಗಿ, ಶಿಕ್ಷಣ, ಪ್ರವಾಸೋದ್ಯಮ ಇಲಾಖೆಯು ಪ್ರಮುಖವಾಗಿವೆ. ಈ ಇಲಾಖೆಗಳ ಮೇಲೆ ಮುಖಂಡರು ಕಣ್ಣಿದ್ದು, ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರುವ ಕೆಲಸ ನಡೆಯುತ್ತಿದೆ. ಲೋಕೋಪಯೋಗಿ ಮತ್ತು ಇಂಧನ ಇಲಾಖೆಗೆ ಎಚ್‌.ಡಿ.ರೇವಣ್ಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇವಣ್ಣ ಎರಡು ಇಲಾಖೆಯನ್ನು ಹೊಂದಿದ್ದರು. ಅದೇ ಸೂತ್ರವನ್ನು ಈ ಬಾರಿಯು ಅನ್ವಯವಾಗಬೇಕು ಎಂಬ ಆಕಾಂಕ್ಷೆ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಇದಕ್ಕೆ ಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ. ಜೆಡಿಎಸ್‌ಗೆ ಸಿಕ್ಕಿರುವುದು ಕಡಿಮೆ ಖಾತೆಗಳಾಗಿದ್ದು, ಅದರಲ್ಲಿಯೂ ಎರಡು ಖಾತೆಗಳನ್ನು ರೇವಣ್ಣ ತೆಗೆದುಕೊಂಡರೆ ಇತರೆ ನಾಯಕರಿಗೆ ಅನ್ಯಾಯವಾಗಲಿದೆ ಎಂಬುದು ಕೆಲ ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಹೀಗಾಗಿ ಲೋಕೋಪಯೋಗಿ ಅಥವಾ ಇಂಧನ ಒಂದು ಇಲಾಖೆ ರೇವಣ್ಣ ಅವರಿಗೆ ನೀಡಿ ಮತ್ತೊಂದು ಇಲಾಖೆಗೆ ಹಿರಿಯ ನಾಯಕರನ್ನು ಪರಿಗಣಿಸಬೇಕು ಎಂದು ಪಕ್ಷದ ವರಿಷ್ಠರ ಬಳಿ ನಾಯಕರು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚುನಾವಣೆಯಲ್ಲಿ ಮಣಿಸಿರುವ ಜಿ.ಟಿ.ದೇವೇಗೌಡ ಕಂದಾಯದಂತಹ ಪ್ರಮುಖ ಖಾತೆಗಳ ಮೇಲೆ ಕಣ್ಣಿದ್ದರು. ಆದರೆ, ಪ್ರಮುಖ ಖಾತೆಗಳು ಕಾಂಗ್ರೆಸ್‌ ಪಾಲಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಲಭ್ಯವಾಗಿರುವ ಖಾತೆಗಳಲ್ಲಿಯೇ ಪ್ರಮುಖ ಖಾತೆಯಾಗಿರುವ ಇಂಧನ, ಲೋಕೋಪಯೋಗಿ ಅಥವಾ ಸಾರಿಗೆ ಇಲಾಖೆ ಮೇಲೆ ಆಸೆ ಇರುವ ಇರುವ ಕುರಿತು ತಮ್ಮ ಆಪ್ತರ ಬಳಿಕ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸಹಕಾರ ಇಲಾಖೆ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಜಿ.ಟಿ.ದೇವೇಗೌಡ ಅವರಿಗೆ ಆಸಕ್ತಿ ಇಲ್ಲ ಎಂದು ಹೇಳಲಾಗಿದೆ.

ಫಾರೂಕ್‌ಗೆ ಏನು?:

ಇನ್ನು ಪಕ್ಷಕ್ಕೆ ಆರ್ಥಿಕ ಬಲ ತುಂಬುವ ಮತ್ತು ವಿಧಾನಪರಿಷತ್‌ಗೆ ಪ್ರವೇಶಿಸುವುದು ಖಚಿತವಾಗಿರುವ ಬಿ.ಎಂ.ಫಾರೂಕ್‌ಗೆ ಪ್ರಮುಖ ಖಾತೆ ನೀಡುವ ಆಸಕ್ತಿ ಪಕ್ಷದ ವರಿಷ್ಠರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ವಿಧಾನಪರಿಷತ್‌ ಬಸವರಾಜ್‌ ಹೊರಟ್ಟಿಅವರು ಪಕ್ಷದ ವರಿಷ್ಠರ ಬಳಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಅನುಭವ ಮತ್ತು ಹಿರಿತನ ಆಧಾರದ ಮೇಲೆ ಶಿಕ್ಷಣ ಇಲಾಖೆ ನೀಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಸವರಾಜ್‌ ಹೊರಟ್ಟಿಪಾಲಾದರೆ, ಉನ್ನತ ಶಿಕ್ಷಣವು ಎಚ್‌.ವಿಶ್ವನಾಥ್‌ಗೆ ಲಭ್ಯವಾಗುವ ಸಾಧ್ಯತೆ ಇದೆ.

ಬಿಎಸ್‌ಪಿ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಹೇಶ್‌ಗೆ ಒಂದು ಖಾತೆ ಸಿಗುವುದು ಖಚಿತ ಎನ್ನಲಾಗಿದೆ. ಅಬಕಾರಿ, ಸಹಕಾರಿ, ಪಶುಸಂಗೋಪನೆ, ಸಣ್ಣ ಕೈಗಾರಿಕೆ, ರೇಷ್ಮೆ, ತೋಟಗಾರಿಕೆ, ಸಾರಿಗೆ, ಸಣ್ಣ ನೀರಾವರಿ ಇಲಾಖೆಗಾಗಿ ಬಂಡೆಪ್ಪ ಕಾಶೆಂಪೂರ, ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವು ನಾಯಕರ ಹಗ್ಗಜಗ್ಗಾಟ ನಡೆದಿದೆ.

ನಿಗಮ-ಮಂಡಳಿಗೆ ಲಾಬಿ:

ಕಡಿಮೆ ಸಂಖ್ಯೆಯಲ್ಲಿ ಸಚಿವ ಸ್ಥಾನ ಜೆಡಿಎಸ್‌ಗೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ತಮಗೆ ಸಚಿವ ಸ್ಥಾನ ಲಭ್ಯವಾಗುವುದಿಲ್ಲ ಎಂಬುದು ಖಚಿತತೆ ಇರುವ ಹಿನ್ನೆಲೆಯಲ್ಲಿ ನಿಗಮ-ಮಂಡಳಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಿವಾಸ ಮುಂದೆ ಪ್ರತಿನಿತ್ಯ ನಾಯಕರ ದಂಡು ಕಾಣುತ್ತಿದೆ. ಕಡಿಮೆ ಸಂಖ್ಯೆಯಲ್ಲಿ ಸಚಿವ ಸ್ಥಾನ ಲಭ್ಯವಾಗಿರುವುದರಿಂದ ನಿಗಮ-ಮಂಡಳಿಗಳ ಸ್ಥಾನಗಳನ್ನು ಹೆಚ್ಚಿಗೆ ಪಡೆದುಕೊಳ್ಳುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವವರು ಸೇರಿದಂತೆ ಸಚಿವ ಸ್ಥಾನ ಸಿಗದವರು ಮತ್ತು ವಿಧಾನಪರಿಷತ್‌ ಸದಸ್ಯರು ನಿಗಮ-ಮಂಡಳಿಗಳ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಕುಮಾರಸ್ವಾಮಿ ಮತ್ತು ದೇವೇಗೌಡ ಅವರನ್ನು ಭೇಟಿ ಮಾಡಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಛಲ ಬಿಡದೆ ತಮ್ಮ ಪ್ರಯತ್ನ ಮುಂದುವರಿಸಿರುವ ಶಾಸಕರ ಪೈಕಿ ಯಾರಿಗೆ ಸ್ಥಾನ-ಮಾನ ಕೊಡಲಿದ್ದಾರೆ ಎಂಬುದು ಜೆಡಿಎಸ್‌ ವರಿಷ್ಠರ ನಡೆ ಮಾತ್ರ ನಿಗೂಢ.

Follow Us:
Download App:
  • android
  • ios