ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರು ಮತ್ತು ಭದ್ರತಾ ಸಿಬ್ಬಂದಿ ಹೊಡೆದಾಟ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ. 

ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಭಕ್ತರು ಮತ್ತು ಭದ್ರತಾ ಸಿಬ್ಬಂದಿ ಹೊಡೆದಾಟ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ. ಜೂ.25ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಧರ್ಮಸ್ಥಳ ಪೊಲೀಸ್‌ ಠಾಣೆಯ ಮೂಲಗಳು ತಿಳಿಸಿವೆ.

ಭಕ್ತರ ಸಂಖ್ಯೆ ಹೆಚ್ಚಾಗಿರುವ ಸಂದರ್ಭದಲ್ಲಿ ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗಬೇಕಾಗುತ್ತದೆ. ಹೀಗೆ ಸರತಿ ಸಾಲಿನಲ್ಲಿ ನಿಂತಿರುವಾಗ ಕೆಲವರು ಭದ್ರತಾ ಸಿಬ್ಬಂದಿ ಜತೆಗೆ ವಾಗ್ವಾದ ಆರಂಭಿಸಿದ್ದಾರೆ. ಕೊನೆಗೆ ಪರಿಸ್ಥಿತಿ ಕೈ ಮೀರಿ, ಭದ್ರತಾ ಸಿಬ್ಬಂದಿ ಜತೆ ಕೈ ಕೈ ಮಿಲಾಯಿಸಿದ್ದಾರೆ. ಯುವಕರು, ಮಹಿಳೆಯರು ಭದ್ರತಾ ಸಿಬ್ಬಂದಿ ಜತೆ ಹೊಡೆದಾಡಿಕೊಂಡಿದ್ದು, ದೇವಸ್ಥಾನ ಎಂಬುದನ್ನು ಲೆಕ್ಕಿಸದೇ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಕೊನೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ವೇಳೆ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಬಳಿಕ ಬಿಟ್ಟುಕಳುಹಿಸಿದ್ದಾರೆ.

ಗಲಾಟೆ ನಡೆಯುವ ವೇಳೆ ಅಲ್ಲೇ ಇದ್ದ ಭಕ್ತರೊಬ್ಬರು ಇದನ್ನು ಮೊಬೈಲ್‌ನಲ್ಲಿ ಸೆರೆ ಮಾಡಿಕೊಂಡಿದ್ದು, ವೈರಲ್‌ ಮಾಡಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿ ದರ್ಪದಿಂದಾಗಿ ಈ ಘಟನೆ ಸಂಭವಿಸಿದೆ ಅನ್ನುವ ರೀತಿ ಈ ದೃಶ್ಯಾವಳಿಯನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಯುವಕರ ಈ ವರ್ತನೆಗೆ ಸ್ಥಳೀಯರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.