ಸತ್ತ ಮಗ ಬದುಕಿ ಬರುತ್ತಾನೆಂದು 38 ದಿನ ಸ್ಮಶಾನದಲ್ಲೇ ಕಳೆದ ತಂದೆ!

ವಿಜಯವಾಡ[ಜ.28]: ಸಾವನ್ನಪ್ಪಿದ ಮಗ ಮತ್ತೆ ಮರಳಿ ಬದುಕಿ ಬರುತ್ತಾನೆ ಎಂಬ ಮಂತ್ರವಾದಿಯೊಬ್ಬನ ಮಾತು ನಂಬಿದ ವೃದ್ಧರೊಬ್ಬರು 38 ದಿನ ಸ್ಮಶಾನದಲ್ಲೇ ವಾಸವಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೆ, ಸತ್ತ ಮಗನನ್ನು ಬದುಕಿಸುತ್ತೇನೆ ಎಂದು ಮಂಕುಬೂದಿ ಎರಚಿ ಮಂತ್ರವಾದಿಯು ತುಪ್ಪಕುಲಾ ರಾಮು(56) ಅವರಿಂದ ಸುಮಾರು 7 ಲಕ್ಷ ರು. ಪೀಕಿದ್ದಾರೆ ಎಂಬ ಸಂಗತಿಯೂ ಇದೀಗ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಂದಿ ಜ್ವರದ ಪರಿಣಾಮ ತುಪ್ಪಕುಲಾ ರಾಮು ಅವರ ಪುತ್ರ ಶ್ರೀನಿವಾಸುಲು(26) ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಕೆಲವರು ಶ್ರೀನಿವಾಸುಲು ಓರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಹುಡುಗಿ ತಂದೆಯೇ ನಿಮ್ಮ ಮಗನ ಮೇಲೆ ಮಾಟ-ಮಂತ್ರ ಮಾಡಿಸಿರಬೇಕು ಎಂದು ಗ್ರಾಮಸ್ಥರು ರಾಮುವಿನ ತಲೆಗೆ ತುಂಬಿದರು. ಇದನ್ನು ನಂಬಿದ ರಾಮು ಅವರು, ಮಂತ್ರವಾದಿಯೊಬ್ಬರಿಗೆ ಮಗನ ಬದುಕಿಸಿಕೊಡುವಂತೆ ಕೋರಿ 7 ಲಕ್ಷ ರು. ನೀಡಿದ್ದರು. ಅಲ್ಲದೆ, ಅವರು ಹೇಳಿದಂತೆ 41 ದಿನಗಳ ಕಾಲ ಸ್ಮಶಾನದಲ್ಲೇ ನೆಲೆಸಲು ಮುಂದಾಗಿದ್ದರು.

ಆದರೆ, ಅಷ್ಟೊತ್ತಿಗಾಗಲೇ ಪೊಲೀಸರು ಈ ಘಟನೆಯನ್ನು ಭೇದಿಸಿದ್ದಾರೆ. ಆದಾಗ್ಯೂ, ಮಂತ್ರವಾದಿ ವಿರುದ್ಧ ಪ್ರಕರಣ ದಾಖಲಿಸಲು ರಾಮು ನಿರಾಕರಿಸಿದ್ದಾರೆ. ಹೀಗಾಗಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.