ಕೋಲ್ಕತ್ತಾ[ಜೂ.14]: ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ವೈದ್ಯರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದರಿಂದ ಎದುರಾಗುತ್ತಿರುವ ಸಮಸ್ಯೆ ಜನಸಾಮಾನ್ಯರನ್ನು ನಲುಗಿಸಿದೆ. ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ವೈದ್ಯಕೀಯ ಸೇವೆಗಳು ನಿಂತು ಹೋಗಿವೆ. ಆಸ್ಪತ್ರೆಗೆ ಚಿಕಿತ್ಸೆಗೆಂದು ತಲುಪಿದ ರೋಗಿಗಳು ಹಾಗೂ ಕುಟುಂಬಸ್ಥರಿಗೆ ತಮ್ಮ ನೋವ್ನನು ಯಾರ ಬಳಿ ವ್ಯಕ್ತಪಡಿಸಬೇಕೆಂದು ತಿಳಿಯುತ್ತಿಲ್ಲ. 

ಕೆಲ ರೋಗಿಗಳಿಗೆ ತಾತ್ಕಾಲಿಕ ಚಿಕಿತ್ಸೆಯ ಅಗತ್ಯವಿದೆ. ಆದರೆ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ನರಳಾಡುತ್ತಿದ್ದಾರೆ. ಹೀಗಿರುವಾಗಲೇ ನವಜಾತ ಶಿಶುವೊಂದು ತನ್ನ ತಂದೆಯ ಕೈಯ್ಯಲ್ಲೇ ಪ್ರಾಣ ಬಿಟ್ಟ ದೃಶ್ಯ ಹೃದಯ ಹಿಂಡುವಂತಿದೆ.

ವೈದ್ಯರ ಜತೆ ದೀದಿ ಸಂಘರ್ಷ: ಮಮತಾ ವಿರುದ್ಧ ಕಿಡಿಕಾರಿದ ಕೋಲ್ಕತ್ತಾ ಮೇಯರ್ ಪುತ್ರಿ!

ಸುದ್ದಿಪತ್ರಿಕೆಯೊಂದರ ಛಾಯಾಗ್ರಾಹಕಿ ದಮಯಂತಿ ದತ್ತಾ ತಮ್ಮ ಟ್ವಿಟರ್ ಖಾತೆಯಲ್ಲಿ ಪಶ್ಚಿಮ ಬಂಗಾಳದ ಜನತೆ ಚಿಕಿತ್ಸೆ ಸಿಗದೆ ಹೇಗೆ ನರಳಾಡುತ್ತಿದ್ದಾರೆ ಎಂಬುವುದನ್ನು ತೋರಿಸುವ ಫೋಟೋ ಒಂದನ್ನು ಸೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಕುರಿತಾಗಿ ಬರೆದುಕೊಂಡಿರುವ ದತ್ತಾ 'ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ನವಜಾತ ಶಿಶುವೊಂದು ತನ್ನ ಅಪ್ಪನ ಕೈಯ್ಯಲ್ಲೇ ಪ್ರಾಣ ಬಿಟ್ಟಿದೆ' ಎಂದು ಬರೆದಿದ್ದಾರೆ.

ಮಂಗಳವಾರ ಮೃತ ರೋಗಿಯೊಬ್ಬರ ಸಂಬಂಧಿಕರು ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಹಾಗೂ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆಸ್ಪತ್ರೆಗಳಿಗೆ ಶಸ್ತ್ರಸಜ್ಜಿತ ಪೊಲೀಸರ ಭದ್ರತೆ ವಹಿಸಬೇಕು. ದಾಳಿ ಮಾಡಿದವರನ್ನು ಜಾಮೀನು ರಹಿತ ಕೇಸು ದಾಖಲಿಸಿ ಬಂದಿಸಬೇಕು ಎಂದು ಆಗ್ರಹಿಸಿ ವೈದ್ಯರು ಅಂದಿನಿಂದಲೇ ಮುಷ್ಕರ ನಡೆಸುತ್ತಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ. 

ಈಗಾಗಲೇ 60ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ಸಲ್ಲಿಸಿದ್ದು, ಮಮತಾ ಬ್ಯಾನರ್ಜಿ ಕ್ಷಮೆ ಯಾಚಿಸುವವರೆಗೆ ಈ ಪ್ರತಿಭಟನೆ ಮುಂದುರೆಸುವುದಾಗಿ ತಿಳಿಸಿದ್ದಾರೆ.