ಕನ್ನಡಕ್ಕೆ ಡಬ್ ಆಗಿದೆ ಎಂದು ಹೇಳಲಾಗುತ್ತಿದ್ದ ಹಾಲಿವುಡ್ ಸಿನಿಮಾ ಫಾಸ್ಟ್ ಆ್ಯಂಡ್ ಫ್ಯೂರಿಯಸ್-8’ ಶ್ರುಕವಾರ ಬಿಡುಗಡೆ ಆಗಿಲ್ಲ. ಕನ್ನಡ ಮಾತ್ರವಲ್ಲ ಹಿಂದಿ ಸೇರಿ ಉಳಿದ ಭಾಷೆಗಳಲ್ಲೂ ತೆರೆ ಕಾಣಲು ಅವಕಾಶ ಸಿಕ್ಕಿಲ್ಲ. ತಾಂತ್ರಿಕ ದೋಷವೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ.
ಬೆಂಗಳೂರು(ಸೆ.02): ಕನ್ನಡಕ್ಕೆ ಡಬ್ ಆಗಿದೆ ಎಂದು ಹೇಳಲಾಗುತ್ತಿದ್ದ ಹಾಲಿವುಡ್ ಸಿನಿಮಾ ಫಾಸ್ಟ್ ಆ್ಯಂಡ್ ಫ್ಯೂರಿಯಸ್-8’ ಶ್ರುಕವಾರ ಬಿಡುಗಡೆ ಆಗಿಲ್ಲ. ಕನ್ನಡ ಮಾತ್ರವಲ್ಲ ಹಿಂದಿ ಸೇರಿ ಉಳಿದ ಭಾಷೆಗಳಲ್ಲೂ ತೆರೆ ಕಾಣಲು ಅವಕಾಶ ಸಿಕ್ಕಿಲ್ಲ. ತಾಂತ್ರಿಕ ದೋಷವೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ.
ಆದರೆ, ಭಾಷಾಂತರದಲ್ಲಾದ ದೋಷಕ್ಕೆ ಸೆನ್ಸಾರ್ ಮಂಡಳಿಯಿಂದ ಬಿಡುಗಡೆಗೆ ಅನುಮತಿ ಸಿಕ್ಕಿಲ್ಲ ಎನ್ನುವ ನಿಗೂಢ ಅಂಶವೇ ಅದಕ್ಕೆ ಕಾರಣ ಎನ್ನುವುದು ತಿಳಿದು ಬಂದಿದೆ. ತಮಿಳಿನ ‘ಸತ್ಯದೇವ್ ಐಪಿಎಸ್ ’ ಚಿತ್ರದ ನಂತರ ಕನ್ನಡಕ್ಕೆ ಡಬ್ ಆದ ಪರಭಾಷೆಯ ಚಿತ್ರಗಳ ಪೈಕಿ ಇತ್ತೀಚೆಗೆ ಸದ್ದು ಮಾಡಿದ ಚಿತ್ರ ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’. ಇದು ಹಾಲಿವುಡ್‌ನ ಸೂಪರ್ ಹಿಟ್ ಚಿತ್ರ.
ಸದ್ದಿಲ್ಲದೆ ಮುಂಬೈನಲ್ಲಿ ‘ವೇಗ ಮತ್ತು ಉದ್ವೇಗ 8’ ಹೆಸರಲ್ಲಿ ಕನ್ನಡಕ್ಕೆ ಡಬ್ ಆಗಿದೆ. ಆನ್'ಲೈನ್'ಲ್ಲಿ ಇದರ ಟ್ರೇಲರ್ ಅನಾವರಣ ಆದಾಗಲೇ ಇದು ಕನ್ನಡಕ್ಕೆ ಡಬ್ ಆಗಿದೆ ಎನ್ನುವ ಸುದ್ದಿ ಹರಡಿತ್ತು. ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ ವ್ಯಕ್ತಿ ಅಥವಾ ಸಂಸ್ಥೆ ಅಧಿಕೃತವಾಗಿ ಈ ತನಕ ಯಾವುದೇ ಹೇಳಿಕೆ ನೀಡಿಲ್ಲ.ಆದರೆ ಇದರ ಟ್ರೇಲರ್'ನಲ್ಲಿ ಸೆಪ್ಟೆಂಬರ್ 1 ರಂದೇ ಈ ಚಿತ್ರ ಕನ್ನಡದಲ್ಲಿ ತೆರೆ ಕಾಣುತ್ತಿದೆ ಎಂದು ಹೇಳಲಾಗಿತ್ತು.
ಈಗ ಅದು ತಾಂತ್ರಿಕ ದೋಷದ ನೆಪ ದಲ್ಲಿ ಬಿಡುಗಡೆ ಆಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ಇದರ ಭಾಷಾಂತರದಲ್ಲಿ ಸಾಕಷ್ಟು ದೋಷಗಳಿವೆ. ಕನ್ನಡಕ್ಕೆ ಡಬ್ ಮಾಡಿರುವವರು ಕನ್ನಡದ ಪದಗಳನ್ನೇ ಸರಿಯಾಗಿ ಉಚ್ಚಾರಣೆ ಮಾಡಿಲ್ಲ ಹಾಗೂ ಕೆಲವು ಅಶ್ಲೀಲ ಪದಗಳ ಬೈಗುಳಗಳನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿರುವುದು ಆಕ್ಷೇಪಕ್ಕೆ ಗುರಿಯಾಗಿದೆ.
