ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ವಶಕ್ಕೆ ತೆಗೆದುಕೊಳ್ಳಿ ಎಂದು ಕೇಂದ್ರ ಸರಕಾರಕ್ಕೆ ಫಾರೂಕ್ ಸವಾಲು ಹಾಕಿದ್ದಾರೆ.
ನವದೆಹಲಿ(ನ. 26): ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ)ದ ಮೇಲೆ ತನ್ನ ಹಕ್ಕು ಇದೆ ಎಂದು ಪ್ರತಿಪಾದಿಸುತ್ತಿರುವ ಭಾರತದ ಮೇಲೆ ಮಾಜಿ ಕಾಶ್ಮೀರ ಸಿಎಂ ಫಾರೂಕ್ ಅಬ್ದುಲ್ಲಾ ಹರಿಹಾಯ್ದಿದ್ದಾರೆ. ಪಿಓಕೆ ಏನು ಭಾರತದ ಅಪ್ಪನ ಮನೆ ಆಸ್ತಿಯೇ? ಎಂದು ಫಾರೂಕ್ ಪ್ರಶ್ನಿಸಿದ್ದಾರೆ. ಚೀನಾಬ್ ಕಣಿವೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖಂಡರಾದ ಫಾರೂಕ್ ಅಬ್ದುಲ್ಲಾ, "ಪಿಓಕೆ ಸದ್ಯ ಪಾಕಿಸ್ತಾನದ ವಶದಲ್ಲಿದೆ. ಪೂರ್ವಜರಿಂದ ಪಿತ್ರಾರ್ಜಿ ಆಸ್ತಿಯಂತೆ ಇದೇನು ಭಾರತದ ಖಾಸಗಿ ಆಸ್ತಿಯಲ್ಲ" ಎಂದು ಫಾರೂಕ್ ಅಬ್ದುಲ್ಲಾ ಟೀಕಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಒಂದು ಭಾಗವಾಗಿದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಈ ಪಿಓಕೆ ವಿವಾದ ಮಾತ್ರವೇ ಇರುವುದು ಎಂದು ಭಾರತದ ಸಂಸತ್'ನಲ್ಲಿ ಪ್ರಕಟವಾದ ನಿರ್ಣಯಕ್ಕೆ ಫಾರೂಕ್ ಅಬ್ದುಲ್ಲಾ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಕೂಡ ಹಕ್ಕು ಹೊಂದಿರುವುದನ್ನು ಭಾರತ ಸರಕಾರವೇ ಒಪ್ಪಿಕೊಂಡಿದೆ. ಪಾಕಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸದೇ ಬೇರೆ ದಾರಿ ಇಲ್ಲ" ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಧೈರ್ಯವಿದ್ದರೆ ಮಾಡಿ:
ತಾಕತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ವಶಕ್ಕೆ ತೆಗೆದುಕೊಳ್ಳಿ ಎಂದು ಕೇಂದ್ರ ಸರಕಾರಕ್ಕೆ ಫಾರೂಕ್ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲ, "ಜಮ್ಮು-ಕಾಶ್ಮೀರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ತಾಕತ್ತು ಪಾಕಿಸ್ತಾನಕ್ಕೂ ಇಲ್ಲ. ಇವೆರಡೂ ರಾಷ್ಟ್ರಗಳ ಹಿಡಿತದಲ್ಲಿ ಕಾಶ್ಮೀರದ ಅಮಾಯಕ ಜನರು ನರಳುತ್ತಿದ್ದಾರೆ," ಎಂದು ಫಾರೂಕ್ ಆರೋಪಿಸಿದ್ದಾರೆ.
ಜಮ್ಮು-ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಭಾಗಗಳನ್ನು ಸ್ವಾಯತ್ತ ರಾಜ್ಯಗಳಾಗಿ ಮಾಡಬೇಕೆನ್ನುವುದು ಫಾರೂಕ್ ಅಬ್ದುಲ್ಲಾ ಅವರ ಬೇಡಿಕೆಯಾಗಿದೆ. ಭಾರತ ಮತ್ತು ಪಾಕಿಸ್ತಾನ ಸರಕಾರಗಳ ಹಸ್ತಕ್ಷೇಪವಿಲ್ಲದಂತಹ ವ್ಯವಸ್ಥೆ ಇಲ್ಲಿರಬೇಕಿದೆ. ಗಡಿ ನಿಯಂತ್ರಣ ರೇಖೆಯ ಕಠಿಣ ನಿಯಮಗಳನ್ನು ಸಡಿಲಗೊಳಿಸಿ ಎರಡೂ ನಾಡಿನ ನಡುವೆ ವ್ಯಾಪಾರ ಸಂಬಂಧ ನಿರಾತಂಕವಾಗಿ ನಡೆಯಬೇಕು ಎನ್ನುವುದು ಮಾಜಿ ಕಾಶ್ಮೀರ ಸಿಎಂ ಅವರ ಸಲಹೆಯಾಗಿದೆ.
