ಗದಗ(ಜು.02): ಈ ಜಿಲ್ಲೆಯಲ್ಲಿ ಸತತ ನಾಲ್ಕು ವರ್ಷಗಳಿಂದ  ರೈತರು ಬರದಿಂದ ಬಳಲುತ್ತಿದ್ದಾರೆ. ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡ ಬರಪೀಡಿತ ಜಿಲ್ಲೆ ಅಂತ ಘೋಷಣೆ ಮಾಡಿದೆ. ಆದರೆ, ಅಧಿಕಾರಿಗಳು ಮಾತ್ರ ವಿಮಾ ಕಂಪನಿಗೆ ರೈತರ ಜಮೀನುಗಳಲ್ಲಿ ಭರ್ಜರಿ ಬೆಳೆ ಬಂದಿದೆ ಅಂತ ವರದಿ ನೀಡಿ ರೈತರಿಗೆ ವಂಚಿಸಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಗದಗ ಜಿಲ್ಲೆಯ ರೈತರು, 2016-17 ರ ಬೆಳೆವಿಮೆ ಹಣ ತುಂಬಿದ್ದಾರೆ. ಆದರೆ ಅವಧಿ ಮುಗಿದರೂ ರೈತರಿಗೆ ನೈಯಾಪೈಸೆ ಬೆಳೆವಿಮಾ ಹಣ ಮಾತ್ರ ಬಂದಿಲ್ಲ. ಗದಗದ ಹತ್ತಾರು ಗ್ರಾಮದ ರೈತರು ವಿಮೆ ಹಣ ಯಾಕೆ ಬಂದಿಲ್ಲ ಅಂತ ಪರಿಶೀಲಿಸಿದಾಗ ನಿಜ ಬಣ್ಣ ಬಯಲಾಗಿದೆ. ತೋಟಗಾರಿಕೆ, ಕೃಷಿ ಇಲಾಖೆ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಚೇರಿಯಲ್ಲಿ ಕುಳಿತು ಬೆಳೆ ಸಮೀಕ್ಷೆ ವರದಿ ವಿಮಾ ಕಂಪನಿಗೆ ನೀಡಿದ್ದಾರೆ. ಅಲ್ಲದೆ ರೈತರು ಜಮೀನುಗಳಲ್ಲಿ ಭರ್ಜರಿ ಬೆಳೆ ಬೆಳೆದಿದ್ದಾರೆ ಅಂತ ಕೂಡ ವರದಿ ನೀಡಿದ್ದಾರೆ. ಹೀಗಾಗಿ ಬೆಳೆವಿಮೆ ಪರಿಹಾರ ಬಂದಿಲ್ಲ ಅಂತ ರೈತರು ಗಂಭೀರ ಆರೋಪ ಮಾಡಿದ್ದಾರೆ.  

ಇನ್ನು ಅಧಿಕಾರಿಗಳು ವಿಮಾ ಕಂಪನಿಗೆ ನೀಡಿರುವ ವರದಿ ನೋಡಿದರೆ ಬೆಳೆ ವಿಮೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ತಿಳಿದು ಬಂದಿದೆ. ಗದಗ ತಾಲೂಕಿನ ಹೊಂಬಳ, ಲಿಂಗದಾಳ, ಚಿಕ್ಕೊಪ್ಪ, ಹಿರೇಕೊಪ್ಪ, ಕದಡಿ, ಗಾವರವಾಡ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳ ರೈತರು ಕೃಷಿ, ತೋಟಗಾರಿಕೆ ಇಲಾಖೆ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರ ಗದಗ ಜಿಲ್ಲೆ ಬರಗಾಲ ಪ್ರದೇಶ ಅಂತ ಘೋಷಣೆ ಮಾಡಿದ್ರೆ, ಅಧಿಕಾರಿಗಳು ಭರಪೂರ ಬೆಳೆ ಬೆಳೆದಿದ್ದಾರೆ ಅಂತ ವಿಮಾ ಕಂಪನಿಗೆ ವರದಿ ನೀಡಿದ್ದಾರೆ. ಬೆಳೆ ವಿಮೆಯಲ್ಲಿ ಕೋಟ್ಯಾಂತರ ಹಗರಣ ನಡೆದಿದ್ದು,  ಸರ್ಕಾರ ತನಿಖೆ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 1153 ರೈತರು ಬೆಳೆ ವಿಮೆ ತುಂಬಿದ ರೈತರು 15.47 ಕೋಟಿ ವಿಮೆ ಹಣ ತುಂಬಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳು 74 ಕೋಟಿ ಹಣ ಯುನಿವರ್ಸಿಯಲ್ ಸೋಂಪೋ ವಿಮಾ ಕಂಪನಿಗೆ ಹಣ ಜಮಾ ಮಾಡಲಾಗಿದೆಯಂತೆ. ಆದ್ರೆ ರೈತರಿಗೆ ಮುಟ್ಟಿದ್ದು ಮಾತ್ರ 14 ಕೋಟಿ ಮಾತ್ರ. ಉಳಿದ ಹಣ ಎಲ್ಲಿ ಹೋಯಿತು ಅಂತ ರೈತರು ಪ್ರಶ್ನಿಸಿದ್ದಾರೆ. , ವಿಮೆ ಕಂಪನಿಯಿಂದ ರೈತರಿಗೆ ಮೋಸವಾಗಿದೆ ಅಂತ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರೈತರು  ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.